ಪ್ರಶಸ್ತಿಗಳಿಗೆ ಬೆಂಕಿಯಿಟ್ಟ ಹರಿಹರಪ್ರಿಯ!

29 LKR PH 02
Published on

ರಾಜ್ಯ ಸರ್ಕಾರದ ವಿರುದ್ಧ ಸಾಹಿತಿ ಅಕ್ರೋಶ | ಪುಸ್ತಕ ಮನೆಯ ಎದುರಿಗೆ ಗುಡ್ಡೆ ಹಾಕಿ ಅಗ್ನಿಗೆ ಆಹುತಿ

ಲಕ್ಕೂರು: ರಾಜ್ಯ ಸರ್ಕಾರ ನೀಡಿದ್ದ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರು ಕೆಂಪೇಗೌಡ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ, ಸನ್ಮಾನಗಳಿಗೆ ಬೆಂಕಿ ಇಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಸಾಹಿತಿ ಹರಿಹರಪ್ರಿಯ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸರ್ಕಾರ ಹಾಗೂ ಸಂಸ್ಥೆಗಳು ನೀಡಿರುವ ನೂರಾರು ಪ್ರಶಸ್ತಿ, ಸನ್ಮಾನಗಳನ್ನು ಬೆಂಕಿಗೆ ಹಾಕಲಾಗುವುದು ಎನ್ನುತ್ತಿದ್ದ ಸಾಹಿತಿ ಹರಿಹರಪ್ರಿಯ ಬುಧವಾರ ಬೆಳಗ್ಗೆ ಎಲ್ಲ ಪ್ರಶಸ್ತಿಗಳನ್ನು ಮಾಲೂರಿನ ಪುಸ್ತಕ ಮನೆಯ ಎದುರಿಗೆ ಗುಡ್ಡೆ ಹಾಕಿ ಅಗ್ನಿಗೆ ಆಹುತಿ ಮಾಡಿದರು. ಸ್ಥಳದಲ್ಲಿ ನೂರಾರು ಜನ ಅಭಿಮಾನಿಗಳು ಒಟ್ಟುಗೂಡಿ ಅವರನ್ನು ಸಮಾಧಾನಪಡಿಸಿದರೂ ಬೆಂಕಿಗೆ ಹಾಕುವುದನ್ನು ನಿಲ್ಲಿಸಲಿಲ್ಲ.

ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಸರ್ಕಾರ

ಕೆಲವೇ ದಿನಗಳ ಹಿಂದೆ ಹೃದಯಾಘಾತವಾಗಿ ಆಸ್ಪತ್ರೆ ಸೇರಿ ಸ್ವಂತ ಖರ್ಚಿನಲ್ಲಿ ವೈದ್ಯಕಿಯ ಸೇವೆ ಪಡೆದಿದ್ದೇನೆ. ವೈದ್ಯಕಿಯ ವೆಚ್ಚದ ಕಡತವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಹಾಗೂ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಕಳುಹಿಸಿ ಒಂದು ವರ್ಷವಾಗಿದೆ. ಅದನ್ನು ಸಹ ಸರ್ಕಾರ ಕಸದ ಬುಟ್ಟಿಗೆ ಎಸೆದಿದೆ. ಇಷ್ಟೊಂದು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಯಾವ ರೀತಿ ಪ್ರತಿಭಟಿಸಬೇಕು? ಕಲ್ಲು ಮನಸ್ಸಿನ ಸರ್ಕಾರ, ಅನಕ್ಷರಸ್ಥ ಸಚಿವರಿಗೆ, ಶಾಸಕರಿಗೆ ಯಾವ ರೀತಿ ಕೇಳಿಕೊಳ್ಳಬೇಕು ಎಂದು ಹರಿಹರಪ್ರಿಯ ಬೇಸರಿಸಿದರು.

ಈಗಾಗಲೇ ಅನಾರೋಗ್ಯ ಹೆಚ್ಚಾದ ಕಾರಣ ಮಾಲೂರು ಸರ್ಕಾರಿ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿರುವುದರಿಂದ ಗುರುವಾರ ಕೋಲಾರದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗುವುದಾಗಿ ತಿಳಿಸಿದರು.

ಸುಮಾರು 60 ವರ್ಷಗಳಿಂದ ಕನ್ನಡ ನಾಡಿನಲ್ಲಿ ಅಕ್ಷರ ಸೇವೆ ಮಾಡಿ 150ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಅನಾರೋಗ್ಯದಿಂದ ನರಳುತ್ತಿರುವ ಹರಿಹರಪ್ರಿಯ ಅವರು ಮಾನಸಿಕವಾಗಿ ಕುಸಿದು ಹೋಗಿದ್ದಾರೆ. ಸರ್ಕಾರ ಇಲ್ಲವೆ ಜನಪ್ರತಿನಿಧಿಗಳು ಈ ಬಗ್ಗೆ ನೆರವು ನೀಡಲು ಮುಂದಾಗಬೇಕಾಗಿದೆ ಎಂದು ಸ್ಥಳಿಯರು ಮನವಿ ಮಾಡಿದರು.

ಬೆಂಕಿಯಲ್ಲಿ ಉರಿದು ಹೋದ ಪ್ರಶಸ್ತಿಗಳು

ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ (1999), ಕೆಂಪೇಗೌಡ ಪ್ರಶಸ್ತಿ (2011), ಗೌರವ ಡಾಕ್ಟರೇಟ್​, ಇಂಡಿಯನ್​ ವರ್ಚುಯಲ್​ ಅಕಾಡೆಮಿ ಫಾರ್​ ಪೀಸ್​ ಆ್ಯಂಡ್​ ಎಜುಕೇಷನ್​, ಅನಿಕೇತನ ಪ್ರಶಸ್ತಿ (2015), ಕರ್ನಾಟಕ ಸಾಂಸತಿಕ, ರಾಯಭಾರಿ ಪುರಸ್ಕಾರ (2016), ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ (2016), ಗಳಗನಾಥ ಪ್ರಶಸ್ತಿ (2009 ಪತ್ರಿಕೋದ್ಯಮಕ್ಕಾಗಿ), ರಾಷ್ಟ್ರೀಯ ರತ್ನ, ನವದೆಹಲಿ ಪ್ರಶಸ್ತಿ (2005), ರಾಷ್ಟ್ರಕವಿ ಕುವೆಂಪು ಪ್ರಪ್ರಥಮ ಪ್ರಶಸ್ತಿ (2000) ಸೇರಿ ನೂರಾರು ಪ್ರಶಸ್ತಿಗಳನ್ನು ಹರಿಹರಪ್ರಿಯರು ಅಗ್ನಿಗೆ ಆಹುತಿ ಮಾಡಿದರು.

ಸುಮಾರು 60 ವರ್ಷಗಳಿಂದ ನೀಡಿರುವ ಪ್ರಶಸ್ತಿ, ಫಲಕಗಳನ್ನು ಇದುವರೆಗೂ ಕಾಪಾಡಿಕೊಂಡು ಬರಲಾಗಿತ್ತು. ಆದರೆ, ಅವುಗಳಿಂದ ಯಾವುದೇ ಉಪಯೋಗವಿಲ್ಲ. ಒಂದು ವರ್ಷದ ಹಿಂದೆ ಅನಾರೋಗ್ಯಕ್ಕೆ ತುತ್ತಾದೆ, ಆಗ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ನನ್ನ ಪುಸ್ತಕಮನೆಗೆ ಆಗಮಿಸಿ ಆರೋಗ್ಯ ಹಾಗೂ ಜೀವನ ನಿರ್ವಹಣೆ ನಮ್ಮದೆ ಎಂದವರು ಇದುವರೆಗೂ ತಿರುಗಿಯೂ ನೋಡಿಲ್ಲ. ಇನ್ನು ಮುಂದೆ ಜೀವನ ನಿರ್ವಹಣೆ ಕಷ್ಟವಾಗುವುದರಿಂದ ನಾನು ಇಂತಹ ಗಟ್ಟಿ ನಿರ್ಧಾರ ಮಾಡಿದ್ದೇನೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬದುಕಬೇಕಾಗಿದೆ. | ಹರಿಹರಪ್ರಿಯ, ಹಿರಿಯ ಸಾಹಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net