

ಹರಿಹರ: ಆರಂಭವೇ ಆಗದ ಕಾಮಗಾರಿಗೆ ಬಿಲ್ ಪಡೆದ ಆರೋಪ ಹೊತ್ತಿರುವ ಹರಿಹರ ನಗರಸಭೆಯ ಇಬ್ಬರು ಇಂಜನಿಯರ್‌ಗಳು ಲೋಕಾಯುಕ್ತ ಅಧಿಕಾರಿಗಳಿಗೆ ಕೈಕೊಟ್ಟು ಸ್ಥಳ ಪರಿಶೀಲನೆಯಿಂದ ದೂರವುಳಿದಿದ್ದಾರೆ.
ಸ್ಥಳ ತನಿಖೆಗೆ ಬೆಂಗಳೂರಿನ ಲೋಕಾಯುಕ್ತ ಇಲಾಖೆಯಿಂದ ಬುಧವಾರ ಹರಿಹರಕ್ಕೆ ಆಗಮಿಸಿದ್ದ ಸಿವಿಲ್ ಇಂಜಿನಿಯರ್ ಅನುಷಾ,ಅವರ ಸಿಬ್ಬಂದಿ ಸ್ಥಳೀಯ ಅಧಿಕಾರಿಗಳಿಗೆ ಕಾದು, ಕಾದು ಸುಸ್ತಾದರು.
ಆರೋಪ ಹೊತ್ತವರ ಪೈಕಿ ಹರಿಹರ ನಗರಸಭೆಯ ಹಿಂದಿನ ಪೌರಾಯುಕ್ತೆ ಎಸ್. ಲಕ್ಷ್ಮೀ ಅವರು ಮಾತ್ರ ಆಗಮಿಸಿ ಸದ್ಯಕ್ಕೆ ಪರಿಶೀಲನೆ ವೇಳೆ ಹಾಜರಿರಲು ಆಗುತ್ತಿಲ್ಲ ಎಂದು ಪತ್ರ ನೀಡಿ ತೆರಳಿದರು.
ಹಿನ್ನೆಲೆ: ಹರಿಹರದ ಕೆ.ಆರ್.ನಗರದಲ್ಲಿ ಕಿರುನೀರು ಸರಬರಾಜು ಕಾಮಗಾರಿ ಆರಂಭಿಸಿದೆ ಬಿಲ್ ಪಡೆಯಲಾಗಿದೆ ಎಂದು ಗುತ್ತಿಗೆದಾರರು ಲೋಕಾಯಕ್ತ ಇಲಾಖೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಬೆಂಗಳೂರಿನ ಲೋಕಾಯುಕ್ತ ಇಲಾಖೆ ಸಿವಿಲ್ ಇಂಜಿನಿಯ ರ್ ಅನುಷಾ ಮತ್ತವರ ಸಿಬ್ಬಂದಿ ಬುಧವಾರ ಹರಿಹರಕ್ಕೆ ಭೇಟಿ ನೀಡಿದ್ದರು.
ನೇರವಾಗಿ ನಗರಸಭೆ ಕಚೇರಿಗೆ ಆಗಮಿಸಿದ ಅನುಷಾ ಅವರು ದಾಖಲಾಗಿರುವ ದೂರಿನ ಸಂಬಂಧಿತ ಕಡತ ಪಡೆದು ಆನಂತರ ಕೆ.ಆರ್.ನಗರದ ವಿದ್ಯಾದಾಯಿನಿ ಶಾಲೆ ಸುತ್ತಲಿನ ಕಿರು ನೀರು ಸರಬರಾಜು ಕೇಂದ್ರಕ್ಕೆ ತೆರಳಿ ಮಾಹಿತಿ ಕಲೆ ಹಾಕಿದರು.
ಬಳಿಕ ಮಾತನಾಡಿ ಇನ್ನೂ ಎರಡು ದಿನ ಪರಿಶೀಲನೆ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ದೂರುದಾರರೂ ಆದ ಗುತ್ತಿಗೆದಾರ ಮಜಹರ್ ಸಾಬ್, ಸ್ಥಳೀಯರಾದ ಮಧುಸೂದನ ಮೂಡಿ, ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ, ಇಂಜಿನಿಯರ್ ಪ್ರಕಾಶ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಪಿ.ಜೆ.ಮಹಾಂತೇಶ್ ಇದ್ದರು.
ಹರಿಹರ ನಗರಸಭೆಯಲ್ಲಿ ಈ ಹಿಂದೆ ಎಇಇ ಹಾಗೂ ಎಇಯಾಗಿ ಸೇವೆ ಸಲ್ಲಿಸಿದ ಆರೋಪಿತರು ಸ್ಥಳ ಪರಿಶೀಲನೆ ವೇಳೆ ಬರುತ್ತೇವೆ ಎಂದು ಕೈಕೊಟ್ಟರು. ಇನ್ನೆರಡು ದಿನ ಪರಿಶೀಲನೆ ಮುಂದುವರಿಯಲಿದೆ. ಆರೋಪಿತರು ಆಗಮಿಸಬಹುದು. ಬಾರದಿದ್ದರೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಅನುಷಾ, ಸಿವಿಲ್ ಇಂಜಿನಿಯರ್, ಲೋಕಾಯುಕ್ತ ಇಲಾಖೆ.