

ಹರಿಹರ: ರಾಮಾಯಣ ಮಹ ಕಾವ್ಯದ ಆದರ್ಶಗಳು ಮಾನವ ಕುಲದ ಜೀವನಕ್ಕೆ ದಾರಿದೀಪವಾಗಿವೆ ಎಂದು ಶಾಸಕ ಬಿ.ಪಿ.ಹರೀಶ್ ಬಣ್ಣಿಸಿದರು.
ಎಸ್‌ಜೆವಿಪಿ ಕಾಲೇಜಿನ ಎಂ.ಬಿ.ಗುರುಸಿದ್ದಸ್ವಾಮಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ವಿಶ್ವದ ಅನೇಕ ದೇಶಗಳು ರಾಮಾಯಣದ ಅಂಶಗಳನ್ನು ಆಡಳಿತ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿರುವುದನ್ನು ಗಮನಿಸಿದರೆ ಮಹಾಕಾವ್ಯದ ಮತ್ತು ಅದರ ಸೃಷ್ಟಿಕರ್ತನ ಮಹತ್ವ ತಿಳಿಯುತ್ತದೆ ಎಂದರು.
ಮಹರ್ಷಿ ವಾಲ್ಮೀಕಿ ಒಂದು ಸಮಾಜಕ್ಕೆ ಸೀಮಿತರಲ್ಲ. ಅವರು ವಿಶ್ವದ ದೈವಸ್ವರೂಪರು. ರಾಮಾಯಣದಲ್ಲಿ ಪ್ರೀತಿ, ಸಹೋದರತ್ವ, ವಿಶ್ವಾಸ, ಭಕ್ತಿ, ಆಡಳಿತ, ತ್ಯಾಗ ಮತ್ತು ಸಮರ್ಪಣೆಯ ಬಗ್ಗೆ ವಿವರಿಸಲಾಗಿದೆ ಎಂದು ತಿಳಿಸಿದರು.
ಉಪನ್ಯಾಸ ನೀಡಿದ ಡಿ. ತಿಪ್ಪಣ್ಣ ರಾಜು ಮಾತನಾಡಿ, ವಾಲ್ಮೀಕಿ ಎಂದರೆ ಪರಿವರ್ತನೆ. ಜಗತ್ತಿನ ಅನೇಕ ಭಾಷೆಗಳಿಗೆ ರಾಮಾಯಾಣ ಮಹಾಕಾವ್ಯ ತರ್ಜಮೆ ಆಗಿರುವುದು ನಮ್ಮ ಹೆಮ್ಮೆ ಎಂದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಮಾರಂಭಕ್ಕೂ ಮುನ್ನ ನಗರದ ಹರೀಹರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.
ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ವಾಣಿಜ್ಯ ಇಲಾಖೆಯ ಉಪ ಆಯುಕ್ತ ಮಂಜುನಾಥ್, ತಹಸೀಲ್ದಾರ್ ಕೆ.ಎಂ. ಗುರುಬಸವರಾಜ್, ತಾಪಂ ಇಒ ಎಸ್.ಪಿ. ಸುಮಲತಾ, ಸಮಾಜ ಕಲ್ಯಾಣ ಇಲಾಖೆಯ ಪಿ.ಆರ್. ರಾಮಕೃಷ್ಣ, ಬಿಇಒ ಡಿ. ದುರುಗಪ್ಪ, ನಗರಸಭೆ ಸದಸ್ಯ ದಿನೇಶ ಬಾಬು, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಕೆ.ಆರ್. ರಂಗಪ್ಪ, ನಗರಾಧ್ಯಕ್ಷ ಫಾಲಾಕ್ಷಪ್ಪ, ಪಾರ್ವತಿ, ಮುಖಂಡರಾದ ಕೆ.ಬಿ. ಮಂಜುನಾಥ್, ಹಂಚಿನ ನಾಗಣ್ಣ, ಆಟೋ ರಾಜು ಇತರರಿದ್ದರು.
ತಾಲೂಕು ಆಡಳಿತ, ತಾಪಂ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಆಯೋಜಿಸಲಾಗಿತ್ತು.