ಶಿಕ್ಷಕರು ಭವಿಷ್ಯದ ನಿರ್ಮಾತೃಗಳು

Harihara, Teacher's Day,
Published on

ಹರಿಹರ: ಶಿಕ್ಷಕರು ಭವಿಷ್ಯದ ನಿರ್ಮಾತೃಗಳು ಎಂದು ಶಾಸಕ ಬಿ.ಪಿ.ಹರೀಶ್ ಅಭಿಪ್ರಾಯಪಟ್ಟರು.

ನಗರದ ಗುರುಭವನದಲ್ಲಿ ಮಂಗಳವಾರ ಜಿಲ್ಲಾ, ತಾಲೂಕು ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಕಲಿಕೆ, ಶಿಕ್ಷಣಕ್ಕೆ ಕೊನೇ ಇಲ್ಲ. ದೇಶದ ಪ್ರತಿ ಯಶಸ್ಸಿನಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಯೋಧರು ದೇಶ ರಕ್ಷಣೆ ಮಾಡಿದರೆ, ರೈತರು ಅನ್ನ ನೀಡಿ ಹೊಟ್ಟೆ ತುಂಬಿಸುತ್ತಾರೆ. ಹಾಗೆಯೇ ಶಿಕ್ಷಕರು ಅಕ್ಷರ ಕಲಿಸುವ ಮೂಲಕ ದೇಶ ನಿರ್ಮಿಸುತ್ತಾರೆ ಎಂದರು.

ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಗಳಿಸಿದಾಗ ಅವರಿಗೆ ಮೊದಲು ನೆನಪಾಗುವುದು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರು ಮಾತ್ರ. ಆದ್ದರಿಂದ, ಈ ಹಂತದಲ್ಲಿ ಶಿಕ್ಷಣ ನೀಡುವ ನೀವು ಚಿರಸ್ಮರಣಿಯರು ಎಂದರು.

ಶಿಕ್ಷಕ ಸದಾಶಿವ ಸೊರಟೂರು ಉಪನ್ಯಾಸ ನೀಡಿ, ಶಿಕ್ಷಕ ವೃತ್ತಿ ಮಾಡುವವರಿಗೆ ಸಹನೆ, ತಾಳ್ಮೆ, ಸಮಯ ಪಾಲನೆ, ಭಾಷೆ ಮೇಲೆ ಹಿಡಿತ ಇರಬೇಕು. ನಿರಂತರ ಅಧ್ಯಯನ ಮಾಡಿ ಹೊಸ ವಿಷಯ ಕಲಿಯುವ ಹುಮ್ಮಸ್ಸು ಇರಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಮಾತನಾಡಿ, ಶಿಕ್ಷಕ ವೃತ್ತಿ ಸಾರ್ವಕಾಲಿಕ ಗೌರವ ಸಿಗುತ್ತದೆ. ಅವರು ವಿದ್ಯಾರ್ಥಿ ಮತ್ತು ಶಾಲೆ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಸಲಹೆ ನೀಡಿದರು.

ಇದೇ ವೇಳೆ ನಿವೃತ್ತ ಶಿಕ್ಷಕರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಗರದ ಶ್ರೀ ಹರಿಹರೇಶ್ವರ ದೇವಸ್ಥಾನದಿಂದ ಗುರುಭವನದ ವರೆಗೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.

ನಗರಸಭಾ ಅಧ್ಯಕ್ಷೆ ನಿಂಬಕ್ಕ ಚಂದಾಪುರ, ತಾಪಂ ಇಒ ಎಸ್.ರವಿ, ಸರ್ಕಾರಿ ನೌಕಕರ ಸಂಘದ ಅಧ್ಯಕ್ಷ ಎ.ಕೆ.ಭೂಮೇಶ್, ಶಿಕ್ಷಕರ ಸಂಘದ ಡಿ.ಎಂ.ಮಂಜುನಾಥಯ್ಯ, ಉಮೇಶ್, ಚಂದ್ರಪ್ಪ, ಈಶಪ್ಪ ಬೂದಿಹಾಳ್, ಶರಣಕುಮಾರ ಹೆಗಡೆ, ವಿಶ್ವನಾಥ್, ರೇವಣಸಿದ್ದಪ್ಪ ಅಂಗಡಿ, ಧನ್ಯಕುಮಾರ್, ಕೃಷ್ಣಪ್ಪ, ರಾಮಕೃಷ್ಣಪ್ಪ, ಮಹಮ್ಮದ್ ಇಲಿಯಾಜ್, ದಂಡಿ ತಿಪ್ಪೇಸ್ವಾಮಿ, ರೇವಣ್ಣನಾಯ್ಕ, ಕೆ.ಎಂ.ಬಸವರಾಜಯ್ಯ, ರಿಯಾಜ್ ಆಹ್ಮದ್, ಜ್ಯೋತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net