ಸೃಷ್ಟಿ ಬದಲು ಸೃಷ್ಟಿಕರ್ತನ ಆರಾಧನೆ ಸೂಕ್ತ

Harihara, Seerat Abhiyan,
Published on

ಉಡುಪಿಯ ಅಕ್ಬರ್ ಅಲಿ ಅಭಿಪ್ರಾಯ I ಸೀರತ್ ಅಭಿಯಾನ ಸಮಾರೋಪ

ಹರಿಹರ: ಸೃಷ್ಟಿಗಳನ್ನು ಆರಾಧಿಸುವ, ಪೂಜಿಸುವ ಬದಲು ಸೃಷ್ಟಿಕರ್ತನನ್ನು ಅರಾಧಿಸುವುದು ಸೂಕ್ತ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಉಡುಪಿಯ ಅಕ್ಬರ್ ಅಲಿ ಅಭಿಪ್ರಾಯಪಟ್ಟರು.

ಜಮಾಅತೆ ಇಸ್ಲಾಮಿ ಹಿಂದ್, ಜೈ ಕರುನಾಡು ರಕ್ಷಣಾ ಸಂಘ, ಕರ್ನಾಟಕ ರಕ್ಷಣಾ ವೇದಿಕೆ (ಎಚ್. ಶಿವರಾಮೇಗೌಡ ಬಣ), ರಾಬಿತಾ ಎ ಮಿಲ್ಲತ್ ಸಮಿತಿ, ದಲಿತ ಸಂಘರ್ಷ ಸಮಿತಿಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸೀರತ್ ಅಭಿಯಾನ-2024ರ ಸಮಾರೋಪದಲ್ಲಿ ಉಪನ್ಯಾಸ ನೀಡಿದರು. ಎಲ್ಲ ಆಗುಹೋಗುಗಳ ಅರಿವಿರುವ ಸೃಷ್ಟಿಕರ್ತನಲ್ಲಿ ಪ್ರಾರ್ಥಿಸುವ ಮೂಲಕ ಜೀವನ ಪಾವನ ಮಾಡಿಕೊಳ್ಳಬೇಕು ಎಂದರು.

ಪುಣ್ಯಕೋಟಿ ಗುರುಪೀಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಮಾತನಾಡಿ, ಪ್ರೀತಿ, ಪರಧರ್ಮ ಗೌರವಿಸಿದ ಪ್ರವಾದಿ ಮೊಹಮ್ಮದರ ಬದುಕು ಎಲ್ಲರಿಗೂ ಪ್ರೇರಕವಾಗಿದೆ ಎಂದರು.

ಆರೋಗ್ಯ ಮಾತೆ ಚರ್ಚ್‌ನ ಪ್ರಧಾನ ಧರ್ಮಗುರು ಫಾ. ಕೆ.ಎ.ಜಾರ್ಜ್ ಮಾತನಾಡಿ, ಸ್ನೇಹ ಮತ್ತು ಸದ್ಗುಣಗಳಿಂದ ಮನುಷ್ಯನನ್ನು ಗೆಲ್ಲಬಹುದೇ ವಿನಾ ಬಲ ಮತ್ತು ಶಕ್ತಿಯಿಂದ ಅಲ್ಲ ಎನ್ನುವುದು ಪ್ರವಾದಿ ಮುಹಮ್ಮದ್ ಸಂದೇಶ ನೀಡಿದ್ದಾರೆ ಎಂದರು.

ದೊಡ್ಡಬಾತಿ ತಪೋವನ ಸಂಸ್ಥೆ ಸ್ಥಾಪಕ ಶಶಿಕುಮಾರ್ ಮೆಹರ್ವಾಡೆ ಮಾತನಾಡಿ, ಸುಳ್ಳನ್ನು ಸತ್ಯವೆಂದು ಬಿಂಬಿಸುತ್ತಿರುವ ಇಂದಿನ ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ನಾವೆಲ್ಲರೂ ನಮ್ಮ ಧರ್ಮ ಪಾಲಿಸುತ್ತ, ಇನ್ನೊಬ್ಬರ ಧರ್ಮ ಮತ್ತು ನಂಬಿಕೆಗಳ ಕುರಿತು ಒಳ್ಳೆಯ ಭಾವನೆ ಮೂಡಿಸಿಕೊಂಡು ಬದುಕಲು ಕಲಿಯಬೇಕಾಗಿದೆ ಎಂದರು.

ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ. ರಾಮಚಂದ್ರಪ್ಪ ಮಾತನಾಡಿದರು. ಪ್ರವಾದಿ ಮೊಹಮ್ಮದ್ (ಸ) ಲೇಖನ ಸಂಕಲನ ಕೃತಿ ಬಿಡುಗಡೆ ಮಾಡಲಾಯಿತು.

ವಿವಿಧ ಸಂಘಟನೆಗಳ ಮುಖಂಡರಾದ ಎಚ್.ಕೆ. ಕೊಟ್ರಪ್ಪ, ಎಚ್. ಮಲ್ಲೇಶ್, ಶ್ರೀನಿವಾಸ್ ಕೊಡ್ಲಿ, ಇಲಿಯಾಸ್ ಅಹ್ಮದ್, ಮೊಹಮ್ಮದ್ ಇಕ್ಬಾಲ್ ಮಕಾಂದಾರ್, ಟಿ.ಜೆ. ಮುರುಗೇಶಪ್ಪ, ಕೆ.ಬಿ. ರಾಜಶೇಖರ್, ಕವಿತಾ ಪೇಟೆಮಠ, ರಘುಪತಿ, ರಾಜಶೇಖರ್, ಮಂಜುನಾಥ ಗೌಡ, ಕೊಟ್ರೇಶಪ್ಪ ಇದ್ದರು.

ಮೌಲಾನಾ ಮಹಮ್ಮದ್ ಶಾಹೀದ್ ಹಾಗೂ ಅಬ್ದುಲ್ ರಹಮಾನ್ ಖುರಾನ್ ಪಠಿಸಿದರು. ವೈದ್ಯ ಡಾ.ಗುಲಾಮ್ ನಬಿ ಸ್ವಾಗತಿಸಿದರು. ಶಿಕ್ಷಕ ರಿಯಾಜ್ ಅಹಮದ್ ನಿರೂಪಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ಹರಿಹರ ಘಟಕ ಅಧ್ಯಕ್ಷ ಅಬ್ದುಲ್ ಖಯುಮ್ ವೈ.ಜಿ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net