

ಹರಿಹರ: ಜೂ.29ರಿಂದ ಜು.1ರ ವರೆಗೆ ಬಾಳೆಹೊನ್ನೂರು ರಂಭಾಪುರಿ ಶ್ರೀಗಳ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭವನ್ನು ನಗರದ ದೇವಸ್ಥಾನ ರಸ್ತೆಯ ರೇಣುಕಾ ಮಂದಿರ ಹಳೆಪೇಟೆ ಬಸವೇಶ್ವರ ದೇವಸ್ಥಾನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 8ರಿಂದ 11 ಗಂಟೆವರೆಗೆ ಮೂರು ದಿನಗಳ ಕಾಲ ರಂಭಾಪುರಿ ಶ್ರೀಗಳ ಪೂಜಾ ಕಾರ್ಯಕ್ರಮ ನಂತರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿದೆ.
ಜೂ.29ರ ಸಂಜೆ 6ಕ್ಕೆ ನಡೆಯುವ ಧರ್ಮ ಜಾಗೃತಿ ಸಭೆಯಲ್ಲಿ ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸುವರು.
ಉದ್ಘಾಟನೆಯನ್ನು ಶಾಸಕ ಬಿ.ಪಿ. ಹರೀಶ್ ನೆರವೇರಿಸುವರು. ಹರಪನಹಳ್ಳಿ ತೆಗ್ಗಿನ ಮಠದ ವರಸದ್ಯೋಜಾತ ಶಿವಾಚಾರ್ಯ ಶ್ರೀಗಳು ಉಪದೇಶಾಮೃತ ನೀಡುವರು.
ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಅಥಣಿ ವೀರಣ್ಣ, ಡಾ. ಶಶಿಕುಮಾರ್ ಮೆಹರ‌್ವಾಡೆ, ಶ್ರೀನಿವಾಸ್ ನಂದಿಗಾವಿ ಮತ್ತಿತರರು ಭಾಗವಹಿಸುವರು.
ಜೂ.30ರ ಸಂಜೆ 6ಕ್ಕೆ ಬಾಳೆಹೊನ್ನೂರು ರಂಭಾಪುರಿ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯುವ ಧರ್ಮ ಜಾಗೃತಿ ಸಭೆಯಲ್ಲಿ ಡಾ.ನಾಗಭೂಷಣ ಶಿವಾಚಾರ್ಯ ಶ್ರೀ ಉಪದೇಶಾಮೃತ ನೀಡಲಿದ್ದು, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಡಾ.ಸವಿತಾ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಮಾಜಿ ಮೇಯರ್ ಅಜಯ್ ಕುಮಾರ್ ಭಾಗವಹಿಸಲಿದ್ದಾರೆ.
ಜು.1ರ ಶನಿವಾರ ಸಂಜೆ 6ಕ್ಕೆ ಧರ್ಮ ಜಾಗೃತಿ ಸಭೆ ಸಾನ್ನಿಧ್ಯವನ್ನು ರಂಭಾಪುರಿ ಶ್ರೀಗಳು ವಹಿಸಲಿದ್ದು ಉಪದೇಶಾಮೃತವನ್ನು ಕಣ್ವಕುಪ್ಪೆ ಗವಿಮಠದ ಡಾ.ನಾಲ್ವಡಿ ಶಾಂತಲಿಂಗ ಶ್ರೀಗಳು ನೀಡಲಿದ್ದಾರೆ.
ಅತಿಥಿಗಳಾಗಿ ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ, ಮಾಜಿ ಶಾಸಕರಾದ ಎಚ್.ಎಸ್. ಶಿವಶಂಕರ್, ಎಸ್. ರಾಮಪ್ಪ, ಮುಖಂಡರಾದ ಬಿ.ಎಂ. ವಾಗೀಶ್ ಸ್ವಾಮಿ, ದೇವರಮನಿ ಶಿವಕುಮಾರ್, ತಹಸೀಲ್ದಾರ್ ಪೃಥ್ವಿ ಸಾನಿಕಂ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಇತ್ತೀಚೆಗೆ ಭಾರತೀಯ ನೌಕಾದಳಕ್ಕೆ ಆಯ್ಕೆಯಾದ ನಗರದ ಭೂಮಿಕಾ ಎರೆಸೀಮಿ ಅವರನ್ನು ಗೌರವಿಸಲಾಗುವುದು.