ಕಚೇರಿಯಲ್ಲಿ ಕೂರದೆ ಕ್ಷೇತ್ರ ಸಂಚಾರ ಮಾಡಿ

Harihara meeting
Published on

ಹರಿಹರ: ತಾಲೂಕಿನಲ್ಲಿ ಹಿಂಗಾರು ಮಳೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತಿದ್ದು, ಯಾರಿಗೂ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ಬಿ.ಪಿ.ಹರೀಶ್ ಸೂಚಿಸಿದರು.

ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕೃಷಿ, ಆರೋಗ್ಯ ಮತ್ತು ಪಶು ವೈದ್ಯಕೀಯ ಇಲಾಖೆಯ ಅಧಿಕಾರಿಗಳು ಇಂತಹ ಸಂದರ್ಭದಲ್ಲಿ ಕಚೇರಿಯಲ್ಲಿ ಕೂರದೆ, ತಾಲೂಕಿನಲ್ಲಿ ಸಂಚರಿಸುವಂತೆ ತಾಕೀತು ಮಾಡಿದರು.

ಮಳೆಯಿಂದಾಗಿ ನಗರ ಸೇರಿದಂತೆ ಗ್ರಾಮಾಂತರ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇರುವುದರಲ್ಲಿಯೇ ಒಳ್ಳೆಯ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಇಂದಿನ ಸಭೆಯಲ್ಲಿ ಪಿಡಬ್ಲುೃಡಿ, ನಗರಸಭೆ ಮತ್ತಿತರ ಪ್ರಮುಖ ಇಲಾಖೆ ಅಧಿಕಾರಿಗಳು ಗೈರಾಗಿದ್ದರೆ, ಅವರ ಪರವಾಗಿ ಬಂದ ಅಧಿಕಾರಿಗಳ ಹತ್ತಿರ ಮಾಹಿತಿ ಕೊರತೆ ಕಾರಣ ಈ ಇಲಾಖೆಗಳ ಸಭೆ ಮುಂದಿನ ಸೋಮವಾರ ನಡೆಸಲಾಗುವುದು. ಈ ಕೆಡಿಪಿ ಸಭೆ ತಾಲೂಕಿನ ಅಭಿವೃದ್ಧಿಯಿಂದ ಮುಖ್ಯವಾಗಿದ್ದು ಎನ್ನುವುದನ್ನು ಅಧಿಕಾರಿಗಳು ಅರಿಯಬೇಕು ಎಂದರು.

ಕೃಷಿ ಇಲಾಖೆ ನಾರನಗೌಡ ಮಾತನಾಡಿ, ಈ ಬಾರಿ ವಾಡಿಕೆಗಿಂತ ಶೇಕಡಾ 45ರಷ್ಟು ಅಧಿಕ ಮಳೆಯಾಗಿದೆ. ತಾಲೂಕಿನಲ್ಲಿ ಮಳೆಯಾಶ್ರಿತ ಬೆಳೆಗಳನ್ನು ಬಿತ್ತನೆ ಮಾಡಲಾಗಿದ್ದು, ಹೆಚ್ಚಿನ ಇಳುವರಿ ನಿರೀಕ್ಷೆ ಮಾಡಲಾಗಿದೆ ಎಂದರು.

ಈಗ ಕಾಳು ಕಟ್ಟುತ್ತಿರುವ ಭತ್ತ ಬೆಳೆಗೆ ಹೆಚ್ಚಿನ ಹಾನಿ ಸಂಭವಿಸಬಹುದು. ಅಡಕೆಗೆ ಕಪ್ಪು ಹುಳು ರೋಗ ಕೆಲವು ಕಡೆ ಕಾಣಿಸಿಕೊಂಡಿದ್ದು ಕೀಟನಾಶಕ ಸಿಂಪಡಿಸಬಹುದು. ಇದರಿಂದ ಹೆಚ್ಚನ ನಷ್ಟ ತಪ್ಪಿಸಬಹುದು ಎಂದು ಮಾಹತಿ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ದುರುಗಪ್ಪ ಮಾತನಾಡಿ, ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ. 66 ಬಂದಿತ್ತು. ಈ ಬಾರಿ ಹೆಚ್ಚಳ ಮಾಡುವ ಉದ್ದೇಶದಿಂದ ತರಬೇತಿ ಶಿಬಿರ, ಸಂಜೆ ತರಗತಿ ಮತ್ತಿತರ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದರು.

ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ಮಹೇಶ್ವರಪ್ಪ ಮಾತನಾಡಿ, ಹರಿಹರ ಡಿಪೋಗೆ 14 ಅಶ್ವಮೇಧ ನೂತನ ಬಸ್‌ಗಳನ್ನು ನೀಡಲಾಗಿದೆ. ಇದರಲ್ಲಿ ಬೆಂಗಳೂರು ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಿಡಲಾಗಿದ್ದು, ಉಳಿದಂತೆ ತಾಲೂಕಿನಲ್ಲಿ ಹೆಚ್ಚುವರಿ ಮಾರ್ಗಗಳಲ್ಲಿ ಬಸ್‌ನ್ನು ಬಿಡಲಾಗಿದೆ ಎಂದು ಮಾಹಿತಿ ನೀಡಿದರು.

ನಾಮ ನಿರ್ದೇಶಿತ ಸದಸ್ಯರಾದ ಗೋವಿನಹಾಳ್ ರಾಜು, ಬಿ.ಬಿ.ಮಲ್ಲೇಶ್, ನರೇಂದ್ರ ಕುಮಾರ್ ರೆಡ್ಡಿ, ಸಿ. ಕೋಟ್ರೇಶ್ ಕುಮಾರ್, ಜಬೀವುಲ್ಲಾ, ಕೆ.ಶಿಲ್ಪಾ, ತಹಸೀಲ್ದಾರ್ ಗುರುಬಸವರಾಜ್, ತಾಪಂ ಇಒ ಎಸ್.ಪಿ.ಸುಮಲತಾ, ಡಾ. ಸಿದ್ದೇಶ್, ಸಿಡಿಪಿಒ ಪೂರ್ಣಿಮಾ, ಜಿಪಂ ಗಿರೀಶ್, ಆರೋಗ್ಯ ಇಲಾಖೆಯ ಡಾ.ಖಾದರ್, ಸಾರ್ವಜನಿಕ ಆಸ್ಪತ್ರೆ ಡಾ.ಹನುಮನಾಯ್ಕ, ಸಮಾಜ ಕಲ್ಯಾಣ ಇಲಾಖೆಯ ರಾಮಕೃಷ್ಣಪ್ಪ, ಎಡಿಎಲ್‌ಆರ್ ಸೋಮಶೇಖರ್, ತೋಟಗಾರಿಕೆ ಶಶಿಧರಯ್ಯ, ಕಾರ್ಮಿಕ ಇಲಾಖೆ ನಿರೀಕ್ಷಕಿ ಕವಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net