ಅನಧಿಕೃತ ಟಿಸಿಗಳ ತೆರವಿಗೆ ಆಗ್ರಹ

HRR MANAVI 01
Published on

ಹರಿಹರ: ಸಾರ್ವಜನಿಕ ಸ್ಥಳಗಳಲ್ಲಿರುವ ಖಾಸಗಿ ಬಹು ಮಹಡಿ ಕಟ್ಟಡಗಳ ವಿದ್ಯುತ್ ಪರಿವರ್ತಕಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಡಿಎಸ್‌ಎಸ್ (ಪ್ರೊ.ಬಿ.ಕೃಷ್ಣಪ್ಪ ಬಣ) ಕಾರ್ಯಕರ್ತರು ನಗರದ ಬೆಸ್ಕಾಂ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಂಘಟನೆ ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಪ್ರಭಾವಿಗಳ ವಿವಿಧ ಬಹು ಮಹಡಿ ಕಟ್ಟಡಗಳಿಗೆ ಸಂಬಂಧಿಸಿದ ಟಿಸಿಗಳು ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರವಾಗಿ ಸ್ಥಾಪಿಸಲಾಗಿದೆ.

ರಸ್ತೆ-ಚರಂಡಿ ಸ್ವಚ್ಛಗೊಳಿಸುವ ಪೌರ ಕಾರ್ಮಿಕರು ಸೇರಿ ಈ ಸ್ಥಳದಲ್ಲಿ ಸಂಚರಿಸುವ ಸಾರ್ವಜನಿಕರ ಜೀವಕ್ಕೆ ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಆದ್ದರಿಂದ ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿದರು.

ಕಳೆದ ಒಂದು ವರ್ಷದಿಂದಲೂ ಅನಧಿಕೃತ ಟಿಸಿಗಳ ತೆರವಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಎಇಇ ಸಿ.ಎನ್.ರಮೇಶ್ ಯಾವುದೇ ಕ್ರಮ ಕೈಗೊಂಡಿಲ್ಲ. ವಾಸ್ತವ ತಿಳಿಯಲು ಮಾಹಿತಿ ಕೋರಿ ಮತ್ತೆ ಅರ್ಜಿ ಸಲಿಸಿದ್ದರೂ, ನಿರ್ಧಿಷ್ಟ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.

ಪ್ರಭಾವಿಗಳ ಒತ್ತಡಕ್ಕೆ ಅಧಿಕಾರಿಗಳು ಮಣಿದಿರುವ ಸಾಧ್ಯತೆಯಿದೆ. ಆದ್ದರಿಂದ ಬೆಸ್ಕಾಂ ಇಇ ವಿಜಯಲಕ್ಷ್ಮೀ ಅವರು ನಗರದ ಎಲ್ಲ ಬಹುಮಹಡಿ ಕಟ್ಟಡಗಳ ಟಿಸಿ, ಜನರೇಟರ್ ಅಳವಡಿಸಿದ ಸ್ಥಳಗಳ ಪರಿಶೀಲನೆ ಮಾಡಿ ಅಕ್ರಮ ಟಿಸಿ ಸ್ಥಳಾಂತರಿಸಬೇಕು. ತಪ್ಪಿದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಬೆಸ್ಕಾಂ ಇಇ ಕಚೇರಿ ಅಧಿಕಾರಿ ನಜ್ಮಾ, ಬೇಡಿಕೆಗಳನ್ನು ಇಇ ಗಮನಕ್ಕೆ ತರುವುದಾಗಿ ಹೇಳಿದರು.

ಮುಖಂಡರಾದ ನಿಟ್ಟೂರು ಕೃಷ್ಣಪ್ಪ, ಚೌಡಪ್ಪ.ಸಿ.ಭಾನುವಳ್ಳಿ, ರಘು ಮಲ್ಲಾಣ್ಣನವರ್, ಎಚ್.ಹನುಮಂತಪ್ಪ , ಎಚ್.ಬಿಮೋಹನ, ಎನ್.ಬಸವರಾಜ್, ಪಿ.ಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net