ಪ್ರಕ್ರಿಯೆಯಷ್ಟೇ, ಸದ್ಯಕ್ಕೆ ಫಲಿತಾಂಶ ಪ್ರಕಟವಾಗಲ್ಲ

HRR CMC 29
Published on

ಹರಿಹರ: ಸುಪ್ರೀಂಕೋರ್ಟ್ ಆದೇಶದಂತೆ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ಗುರುವಾರ ನಡೆದಿದೆ. ಆದರೆ ಫಲಿತಾಂಶ ಪ್ರಕಟಿಸುವಂತಿಲ್ಲ ಎಂದು ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಹೇಳಿದರು.

ನಗರಸಭೆಯ ಸಭಾಂಗಣದಲ್ಲಿ ಬೆಳಗ್ಗೆ 11.00ಕ್ಕೆ ಚುನಾವಣೆ ಪ್ರಕ್ರಿಯೆ ನಿಗದಿಯಾಗಿತ್ತು. ಅದರಂತೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಮಹಿಳಾ ಸದಸ್ಯೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಪುರುಷ ಸದಸ್ಯ ಉಮೇದುವಾರಿಕೆ ಸಲ್ಲಿಸಿದ್ದಾರೆ. ನಾಮಪತ್ರ ಪರಿಶೀಲನೆ ಕ್ರಮಬದ್ಧವಾಗಿವೆ. ಒಂದಕ್ಕಿಂತ ಅಧಿಕ ಸದಸ್ಯರು ನಾಮಪತ್ರ ಸಲ್ಲಿಸಿರದ ಕಾರಣ ಚುನಾವಣೆ ನಡೆಸುವ ಪ್ರಶ್ನೆ ಇಲ್ಲ ಎಂದರು.

ಪ್ರಕ್ರಿಯೆ ವೇಳೆ ಜೆಡಿಎಸ್‌ನ-13, ಕಾಂಗ್ರೆಸ್‌ನ-10, ಪಕ್ಷೇತರ ಇಬ್ಬರು ಸದಸ್ಯರು ಭಾಗವಹಿಸಿದ್ದರು. ಬಿಜೆಪಿಯ ಐವರು ಸದಸ್ಯರು ಹಾಗೂ ಶಾಸಕರು, ಸಂಸದರು ಗೈರಾಗಿದ್ದರು.

ಸುಪ್ರೀಂಕೋರ್ಟ್ ಒಂದು ತಿಂಗಳೊಳಗೆ ಪ್ರಕರಣ ಇತ್ಯರ್ಥ ಮಾಡುವಂತೆ ಹೈಕೋರ್ಟ್‌ಗೆ ಆದೇಶಿಸಿದೆ. ಅಲ್ಲಿಯವರೆಗೂ ಕಾಯುವುದು ಅನಿವಾರ್ಯ ಎಂದರು.

ನ್ಯಾಯಾಲಯದ ಆದೇಶದಂತೆ ಮತ ಎಣಿಕೆಗೆ ಮಾತ್ರ ಆದೇಶವಿದೆ. ಅದರಂತೆ ಚುನಾವಣೆ ಪ್ರಕ್ರಿಯೆ ಸಂಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿ, ಅವರ ಆದೇಶ ಪಾಲಿಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net