ಶುಭ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ

HRR KBR 26
Published on

ಹರಿಹರ: ವಿವಾಹ, ಗೃಹ ಪ್ರವೇಶ ಮತ್ತಿತರ ಕಾರ್ಯಕ್ರಮ ನಡೆಸುವವರು ಕಡ್ಡಾಯವಾಗಿ ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಪಡೆಯಬೇಕೆಂದು ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ತಿಳಿಸಿದರು.

ತಾಲೂಕಿನಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಹೆಚ್ಚಲು ಇಂಥ ಸಮಾರಂಭಗಳು ಕಾರಣವೆಂಬ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ಮದುವೆ ಇತರ ಸಮಾರಂಭ ಕೈಗೊಳ್ಳುವ ಮುನ್ನ ನಗರ, ಪಟ್ಟಣ, ಗ್ರಾಮ ಪಂಚಾಯಿತಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು.

ಗರಿಷ್ಠ 50 ಜನರನ್ನು ಸೇರಿಸಲು ಅವಕಾಶವಿದೆ. ನೈಸರ್ಗಿಕವಾಗಿ ಗಾಳಿ, ಬೆಳಕು ಲಭ್ಯವಿರುವ ಸಾರ್ವಜನಿಕ ಸ್ಥಳದಲ್ಲಿ ಸಮಾರಂಭ ನಡೆಸಬೇಕು. ಹವಾ ನಿಯಂತ್ರಣ (ಎಸಿ) ಬಳಸಬಾರದು. ಕಂಟೇನ್ಮೆಂಟ್ ವಲಯದಲ್ಲಿರುವವರು, 65 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಇಂಥ ಸಮಾರಂಭಗಳಲ್ಲಿ ಪಾಲ್ಗೊಳ್ಳುವಂತಿಲ್ಲ.

ಕಾರ್ಯಕ್ರಮ ಆಯೋಜಕರು ಸಮಾರಂಭದ ಪ್ರವೇಶ ದ್ವಾರ ಅಥವಾ ಸೂಕ್ತ ಸ್ಥಳಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಪ್ರತಿಯೊಬ್ಬರಿಗೂ ಪ್ರವೇಶದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳಗಡೆ ಬಿಡಬೇಕು. ಶೀತ, ಕೆಮ್ಮು, ಉಸಿರಾಟ ತೊಂದರೆ ಇರುವವರು ಪಾಲ್ಗೊಳ್ಳಬಾರದು. ಎಲ್ಲರೂ ಮಾಸ್ಕ್ ಧರಿಸಬೇಕು. ಪರಸ್ಪರರು ಕನಿಷ್ಠ 1 ಮೀಟರ್ ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಕೈಗಳನ್ನು ಶುಚಿಗೊಳಿಸಿಕೊಳ್ಳಲು ಹ್ಯಾಂಡ್ ವಾಷ್, ಟಿಶ್ಯು ಪೇಪರ್, ನೀರು, ಶೌಚಗೃಹದ ವ್ಯವಸ್ಥೆ ಮಾಡಬೇಕು. ಮದ್ಯಪಾನ, ಪಾನ್, ಗುಟ್ಕಾ, ತಂಬಾಕು ಸೇವನೆ ನಿಷೇಧಿಸಬೇಕು.

ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಸಮಾರಂಭಗಳಲ್ಲಿ ಪಾಲ್ಗೊಂಡವರ ಹೆಸರು, ಸಂಪರ್ಕ ಸಂಖ್ಯೆ ಕಡ್ಡಾಯವಾಗಿ ದಾಖಲಿಸಬೇಕು. ಭಾಗವಹಿಸುವ ಎಲ್ಲ ಅತಿಥಿಗಳು ಗೂಗಲ್ ಪ್ಲೇ ಸ್ಟೋರ್‌ನಿಂದ ಆರೋಗ್ಯ ಸೇತು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕೆಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net