ಹಾಲಿ, ಮಾಜಿ ಶಾಸಕರ ವಾಗ್ವಾದಕ್ಕೆ ವೇದಿಕೆಯಾದ ಸಭೆ

HRR SABHE 18
Published on

ಹರಿಹರ: ಲಾಕ್‌ಡೌನ್ ಅವಶ್ಯಕತೆ ಕುರಿತು ತಾಲೂಕು ಆಡಳಿತ ಶನಿವಾರ ಕರೆದಿದ್ದ ಸಮಾಲೋಚನೆ ಸಭೆಯಲ್ಲಿ ವ್ಯಾಪಾರದ ಸಮಯ ನಿಗದಿ ಮಾಡುವ ಬಗ್ಗೆ ಹಾಲಿ ಮತ್ತು ಮಾಜಿ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು.

ಜಿಲ್ಲಾಡಳಿತದ ಆದೇಶದಂತೆ ನಗರದ ಎಸ್‌ಜೆವಿಪಿ ಕಾಲೇಜಿನ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿತ್ತು. ಆರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ಬಿ.ಪಿ.ಹರೀಶ್, ದಾವಣಗೆರೆ-ಹರಿಹರ ಅವಳಿ ನಗರವಾಗಿದ್ದು ಅಲ್ಲಿ ಜಾರಿಯಾದ ನಿಯಮಗಳು ಇಲ್ಲಿಯೂ ಜಾರಿಯಾಗಲಿ. ನಗರದಲ್ಲಿ 8 ಗಂಟೆವರೆಗೆ ವ್ಯಾಪಾರಕ್ಕೆ ಅನುಮತಿ ನೀಡಿದರೆ ಅನುಕೂಲ. ಆದರೆ ಕಡಿಮೆ ಸಮಯ ನಿಗದಿ ಮಾಡಿದರೆ ಸಾರ್ವಜನಿಕರು ಅವಸರಪಟ್ಟು ಮುಗಿಬೀಳುವುದು. ಅಲ್ಲದೇ ಪಕ್ಕದ ದಾವಣಗೆರೆಗೆ ಹೋಗಿ ವ್ಯಾಪಾರ ಮಾಡುವುದರಿಂದ ಕರೊನಾ ಹರಡುವ ಸಾಧ್ಯತೆ ಇದೆ ಎಂದು ಹೇಳಿದರು.

ಶಾಸಕ ಎಸ್.ರಾಮಪ್ಪ ಮಧ್ಯಪ್ರವೇಶಿಸಿ, ದಾವಣಗೆರೆಯಲ್ಲಿ ಕರೊನಾದಿಂದ ಸಾವು-ನೋವು ಸಂಭವಿಸುತ್ತಿದೆ. ನೀವು ಹೇಳಿದಂತೆ ಅನುಸರಿಸಿದರೆ ತಾಲೂಕಿನಲ್ಲಿ ಪರಿಸ್ಥಿತಿ ಕೈ ಮೀರಬಹುದು. ಜನರ ಆರೋಗ್ಯ ದೃಷ್ಟಿಯಿಂದ ತೀರ್ಮಾನ ಮಾಡಬೇಕಾಗಿದೆ. ಈ ಸಮಯದಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದರು. ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ನಡುವೆ ವಾಗ್ವಾದ ನಡೆಯಿತು.

ಗ್ರಾಮಾಂತರ ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ ಮಾತನಾಡಿ, ಇದು ಸರ್ಕಾರಿ ಸಭೆ, ರಾಜಕೀಯ ಮಾಡಬಾರದು. ಈ ರೀತಿಯ ವರ್ತನೆ ಸರಿಯಲ್ಲ. ಸಾರ್ವಜನಿಕರಿಗೆ ತಿಳಿವಳಿಕೆ ಹೇಳುವ ನಿಮ್ಮ ನಡುವಳಕೆ ಮಾದರಿಯಾಗಬೇಕು. ಆದರೆ ಇದನ್ನು ನೋಡಿದರೆ ಕರೊನಾಗೆ ಆಹ್ವಾನ ನೀಡುವಂತಿದೆ ಎಂದು ಹೇಳಿದರು.

ಕೆಲವರು ಬಂಡವಾಳ ಹಾಕಿ ವ್ಯಾಪಾರ ಮಾಡುತ್ತಿದ್ದೇವೆ, ಮತ್ತೆ ಕೆಲವರು ಅಂದೇ ದುಡಿದು ಅಂದೇ ತಿನ್ನುವವರು ಇದ್ದೇವೆ. ಇದನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯಕರ ತೀರ್ಮಾನ ಮಾಡಬೇಕು ಎಂದು ವ್ಯಾಪಾರಿಗಳು ಮನವಿ ಮಾಡಿದರು.

ತಹಸೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ಪೌರಾಯುಕ್ತೆ ಎಸ್.ಲಕ್ಷ್ಮೀ, ಟಿಎಚ್‌ಒ ಚಂದ್ರಮೋಹನ್, ಸಿಪಿಐ ಶಿವಪ್ರಸಾದ್, ಪಿಎಸ್‌ಐ ಶೈಲಶ್ರೀ, ತಾಪಂ ಅಧ್ಯಕ್ಷೆ ಶ್ರೀದೇವಿ ಇದ್ದರು.

ಮತ್ತೆ ಲಾಕ್ ಓಪನ್
ಸೋಮವಾರದಿಂದ ಬೆಳಗ್ಗೆ 5.00 ಗಂಟೆ ಯಿಂದ ಸಂಜೆ 6.00 ಗಂಟೆಯವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗುವುದು.
ಎಸ್.ರಾಮಪ್ಪ ಶಾಸಕ

ಜೆಡಿಎಸ್ ಮುಖಂಡರ ಆಗ್ರಹ : ಸಭೆಯಲ್ಲಿನ ವಾತಾವರಣ ನೋಡಿದ ಜೆಡಿಎಸ್ ಮುಖಂಡರು ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಅವರು ಬರುವವರೆಗೂ ಸಭೆ ನಡೆಸಬಾರದು ಎಂದು ಆಗ್ರಹಿಸಿದರು. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರ ಮಾತುಗಳೇ ಅಂತಿಮವಾಗುತ್ತಿವೆ. ವ್ಯಾಪಾರಿಗಳ ಮಾತು ಲೆಕ್ಕಕ್ಕೆ ಇಲ್ಲದಂತಾಗಿದೆ. ಇದೇ ರೀತಿ ನಡೆದರೆ ನಾವು ಈ ಸಭೆಯಿಂದ ಹೊರ ಹೋಗುತ್ತೇವೆ ಎಂದಾಗ ಅಧಿಕಾರಿಗಳು ಕಿವಿಗೊಡದಾಗ ಸುಮ್ಮನೆ ಸಭೆಯಲ್ಲಿ ಕುಳಿತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net