

ಕೀರ್ತಿಕುಮಾರ್ ಹರಿಹರ
ಕಂದಾಯ ಕಟ್ಟಿಸಿಕೊಂಡು ಮೂಲ ಸೌಲಭ್ಯ ಕಲ್ಪಿಸದ ನಗರಸಭೆ ಧೋರಣೆಗೆ ಇಲ್ಲಿನ ಕೆಎಚ್‌ಬಿ ಕಾಲನಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿವೇಶನ ಪಡೆದವರು ಮನೆ ನಿರ್ಮಿಸಿಕೊಂಡಿದ್ದು, ಕಾಲನಿಯಲ್ಲಿ ನಾಲ್ಕುನೂರಕ್ಕೂ ಅಧಿಕ ಮನೆಗಳಿವೆ. ಇನ್ನೂ ಕೆಲವು ನಿರ್ಮಾಣ ಹಂತದಲ್ಲಿವೆ. ಇವರೆಲ್ಲರೂ ತಪ್ಪದೇ ನಗರಸಭೆಗೆ ಕಂದಾಯ ಕಟ್ಟುತ್ತಿದ್ದಾರೆ. ಇವರಿಗೆ ಸೌಲಭ್ಯ ಒದಗಿಸಬೇಕಾದ ನಗರಾಡಳಿತ ಮೈಮರೆತಿದೆ.
ನಗರದ ಹೊರವಲಯದಲ್ಲಿ 10 ವರ್ಷಗಳ ಹಿಂದೆಯೇ ಕೆಎಚ್‌ಬಿ ಕಾಲನಿ ನಿರ್ಮಾಣ ಮಾಡಿದ ಹೌಸಿಂಗ್‌ಬೋರ್ಡ್, ರಸ್ತೆ, ಒಳಚರಂಡಿ, ಪಾರ್ಕ್, ವಿದ್ಯುತ್‌ದೀಪದಂಥ ಸೌಲಭ್ಯ ಕಲ್ಪಿಸಿ, ಹರಾಜು ಮೂಲಕ ಜನರಿಗೆ ನಿವೇಶನ ವಿತರಿಸಿ, ಕಾಲನಿಯನ್ನು ನಗರಸಭೆಗೆ ಹಸ್ತಾಂತರಿಸಿತ್ತು.
ಮ್ಯಾನ್‌ಹೋಲ್ ಅವ್ಯವಸ್ಥೆ: ಲೇಔಟ್ ಬಳಿ ಮ್ಯಾನ್‌ಹೋಲ್ ದುರಸ್ತಿಯಿಂದಾಗಿ ಹೊರ ಬರುವ ನೀರು, ಚರಂಡಿಗಳಲ್ಲಿ ಸಂಗ್ರಹಗೊಂಡು ದುರ್ನಾತ ಬೀರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.
ಕಿತ್ತು ಹೋದ ರಸ್ತೆಗಳು: ಕಾಲನಿ ನಿರ್ಮಾಣ ಸಂದರ್ಭದಲ್ಲಿ ಹಾಕಿದ್ದ ಡಾಂಬರ್ ಕಿತ್ತು ಹೋಗಿ ಅಲ್ಲಲ್ಲಿ ತಗ್ಗುಗಳು ಬಿದ್ದಿವೆ. ಇದರಿಂದ ಜನ-ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ನಿರ್ವಹಣೆ ಇಲ್ಲದ ಬೀದಿ ದೀಪ: ವಿದ್ಯುತ್ ಕಂಬಗಳಿವೆ. ಆದರೆ ಅವುಗಳಲ್ಲಿ ಬಲ್ಬ್ ಇಲ್ಲ. ಇನ್ನೂ ಕೆಲವೊಂದು ಕಂಬಗಳಲ್ಲಿ ಬಲ್ಪುಗಳಿದ್ದರೂ, ಬೆಳಗುತ್ತಿಲ್ಲ. ಇದರಿಂದ ರಾತ್ರಿ ಭೀತಿಯಿಂದ ಓಡಾಡುವಂತಾಗಿದೆ.
ಖಾಲಿ ನಿವೇಶನಗಳಲ್ಲಿ ಗಿಡಗಂಟೆ: ಕಾಲನಿಯ ಬಹುತೇಕ ನಿವೇಶನ, ಪಾರ್ಕ್‌ಗಳಲ್ಲಿ ಜಾಲಿ ಮುಳ್ಳು, ಇತರ ಗಿಡ-ಗಂಟೆಗಳು ಬೆಳೆದು ನಿಂತು ಭೀತಿ ಹುಟ್ಟಿಸಿವೆ. ನಗರಾಡಳಿತ ಕೂಡಲೇ ಮೂಲಸೌಲಭ್ಯ ಕಲ್ಪಿಸಬೇಕೆಂದು ಕಾಲನಿ ನಿವಾಸಿಗಳು ಮನವಿ ಮಾಡಿದ್ದಾರೆ.
ಕೆಎಚ್‌ಬಿ ಕಾಲನಿಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ದುರ್ನಾತ ಬೀರುತ್ತಿವೆ. ಬೀದಿ ದೀಪಗಳು ಬೆಳಗದ ಕಾರಣ ರಾತ್ರಿ ಬ್ಯಾಟರಿ ಬಳಸಿ ಓಡಾಡುವ ದುಸ್ಥಿತಿ ಇದೆ. ಒಳಚರಂಡಿ ಗೋಳು ಎಷ್ಟು ಹೇಳಿದರೂ ತೀರದಂತಾಗಿದೆ.
> ಎಚ್.ನಿಜಗುಣ ಸ್ಥಳೀಯ ನಿವಾಸಿ ದೂಡಾ ಮಾಜಿ ಸದಸ್ಯ ಹರಿಹರ
ನಗರಸಭೆ ಅಧಿಕಾರಿಗಳು ನಮ್ಮಿಂದ ಎರಡ್ಮೂರು ತಿಂಗಳು ಕಾರಣಾಂತರದಿಂದ ಕಂದಾಯ ಕಟ್ಟುವುದು ತಡವಾದರೆ ದಂಡ ಸಹಿತ ವಸೂಲಿ ಮಾಡುತ್ತಾರೆ. ಇದಕ್ಕಿರುವ ಕಾಳಜಿ ಕಾಲನಿಗೆ ಸೌಲಭ್ಯ ಕಲ್ಪಿಸಲು ತೋರುತ್ತಿಲ್ಲ. ಅಧಿಕಾರಿಗಳ ವರ್ತನೆಗೆ ಇಲ್ಲಿನ ಜನ ಬೇಸತ್ತಿದ್ದಾರೆ.
> ಯೋಗೀಶ್ ಪಾಟೀಲ್ ಕೆಎಚ್‌ಬಿ ನಿವಾಸಿ ಹರಿಹರ
ಕೆಎಚ್‌ಬಿ ಕಾಲನಿಯ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿಗಾಗಿ ವಿಶೇಷ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅನುದಾನ ಬಂದ ತಕ್ಷಣ ಕಾಮಗಾರಿ ಪ್ರಾರಂಭ ಮಾಡಲಾಗುವುದು.
> ಎಸ್.ಲಕ್ಷ್ಮಿ ಪೌರಾಯುಕ್ತರು, ನಗರಸಭೆ ಹರಿಹರ