

ಹರಿಹರ: ತಾಲೂಕಿನ ಹರಗನಹಳ್ಳಿ ಸಮೀಪ ಶನಿವಾರ ರಾಷ್ಟ್ರೀಯ ಹೆದ್ದಾರಿ ಪಕ್ಕ ಹಾಯ್ದು ಹೋಗಿರುವ 22 ಕೆರೆಗಳಿಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್ ಒಡೆದು, ನೀರು ಚಿಮ್ಮುತ್ತಿರುವುದರಿಂದ ಕಾರಂಜಿಯಂತೆ ಕಂಡು ಬಂತು.
22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಕಳೆದ ತಿಂಗಳಷ್ಟೇ ಸಂಸದ ಜಿ.ಎಂ.ಸಿದ್ದೇಶ್ವರ್ ಚಾಲನೆ ನೀಡಿದ್ದರು. ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದ ತಿಂಗಳ ಅವಧಿಯಲ್ಲಿ ಎರಡು ಬಾರಿ ಪೈಪ್‌ಲೈನ್ ಒಡೆದಿದೆ. ಈ ಹಿಂದೆ ಬಾತಿ ಸಮೀಪ ಒಡೆದಿತ್ತು. ಈ ಬಾರಿ ಹರಗನಹಳ್ಳಿ ಬಳಿ ಒಡೆದಿದೆ.
ಈ ಕಾರಣದಿಂದ ತಿಂಗಳಲ್ಲಿ ಒಂದು ವಾರ ನೀರು ಸರಬರಾಜಾಗಿಲ್ಲ. ಇದೇ ರೀತಿ 15 ದಿನಕ್ಕೊಮ್ಮೆ ಪೈಪ್ ಒಡೆದರೆ ಸಂಸದರು ಹೇಳಿದ 180 ದಿನ ನೀರು ಪೂರೈಸುವ ಮಾತು ಸುಳ್ಳಾಗುತ್ತದೆ ಎಂಬುದು ಸ್ಥಳಿಯರ ಅಭಿಪ್ರಾಯ.
ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಕನಸಿನಂತೆ ಆ ಭಾಗದ ಜನರ ಜೀವನಾಡಿಯಾಗಿ ಈ ಯೋಜನೆ ಕಾರ್ಯ ನಿರ್ವಹಿಸಲಿದೆ. ಈ ವರ್ಷದಲ್ಲಿ 180ಕ್ಕೂ ಹೆಚ್ಚು ದಿನ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದ್ದರು.
ಈ ಯೋಜನೆ ಪ್ರಾರಂಭವಾದಾಗಿನಿಂದ ಇದೇ ಸಮಸ್ಯೆ ಕಾಡುತ್ತಿದ್ದು ಸ್ಥಳೀಯ ರೈತರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆಹಾನಿಯಾಗುತ್ತಿದೆ. ಎಷ್ಟು ಬಾರಿ ಪೈಪ್‌ಗಳಿಗೆ ತೇಪೆ ಹಾಕಿದರೂ ಮತ್ತೆ ಮತ್ತೆ ಬೇರೆ ಸ್ಥಳಗಳಲ್ಲಿ ನೀರಿನ ರಭಸಕ್ಕೆ ಒಡೆದು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ತಿಂಗಳಲ್ಲಿ ಎರಡ್ಮೂರು ಸಲ ಈ ಸಮಸ್ಯೆ ಕಾಣಿಸುತ್ತಿದೆ ಎಂದು ಸ್ಥಳೀಯ ರೈತ ಅರುಣ್ ಹರಗನಹಳ್ಳಿ ಬೇಸರ ವ್ಯಕ್ತ ಪಡಿಸಿದರು.
ನೀರು ಚಿಮ್ಮುವುದನ್ನು ಕಂಡ ವಾಹನ ಸವಾರರು ಸೆಲ್ಫಿ ತೆಗೆದುಕೊಳ್ಳುತ್ತಿರುವ ದೃಶ್ಯ ಕಂಡು ಬಂದಿತು.