ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು

Harihara, Guruvandana, Sneha Sammilana,
Published on

ಹರಿಹರ: ಪಾಲಕರ ನಂತರ ವ್ಯಕ್ತಿತ್ವ ನಿರೂಪಣೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ಬೆಳ್ಳೂಡಿ ಶ್ರೀ ಪಟೇಲ್ ಗುರುಬಸಪ್ಪ ಪ್ರೌಢಶಾಲೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಹನುಮಂತಗೌಡ ಹೇಳಿದರು.

ತಾಲೂಕಿನ ಬೆಳ್ಳೂಡಿ ಶ್ರೀ ಪಟೇಲ್ ಗುರುಬಸಪ್ಪ ಪ್ರೌಢಶಾಲೆಯಲ್ಲಿ ಭಾನುವಾರ 1985-86ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಂದೆ, ತಾಯಿ ನೀಡುವ ಸಂಸ್ಕಾರ ಮಕ್ಕಳಲ್ಲಿ ಅಗಾಧ ಪರಿಣಾಮ ಬೀರುತ್ತದೆ. ನಂತರದ ಹಂತದಲ್ಲಿ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ಶಿಕ್ಷಕರಿಂದ ದೊರಕುವ ಶಿಕ್ಷಣ, ಬದುಕಿನ ಪಾಠವು ವ್ಯಕ್ತಿತ್ವ ನಿರ್ಮಿಸುವಲ್ಲಿ ಪರಿಣಾಮ ಬೀರುತ್ತದೆ ಎಂದರು.

ನಿವೃತ್ತ ಹಿಂದಿ ಶಿಕ್ಷಕ ಬಿ.ಜಿ.ಚಂದ್ರಪ್ಪ ಮಾತನಾಡಿ, ಶಿಕ್ಷಣ ಪಡೆದ ಶಾಲೆ ಮತ್ತು ಬೋಧಿಸಿದ ಶಿಕ್ಷಕರು ವಿದ್ಯಾರ್ಥಿಗಳ ಜೀವನ ಪರ್ಯಂತ ಸ್ಮರಣೆಯಲ್ಲಿರುತ್ತಾರೆ. ಮೊಬೈಲ್, ಇಂಟರ್‌ನೆಟ್ ಇಲ್ಲದ ಆ ಕಾಲದಲ್ಲಿ ಶಿಕ್ಷಕರು ಬೋಧಿಸುತ್ತಿದ್ದ ಪಾಠವೇ ಪ್ರಮುಖ ಮಾಹಿತಿಯ ಕಣಜವಾಗಿತ್ತು ಎಂದರು.

ನಿವೃತ್ತ ಕನ್ನಡ ಶಿಕ್ಷಕಿ ಕೆ.ಸಿ.ಸರೋಜಮ್ಮ ಮಾತನಾಡಿ, ಜಗತ್ತಿನಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಸಂಬಂಧಕ್ಕೆ ವಿಶೇಷ ಮಹತ್ವವಿದೆ. ಪಠ್ಯದಲ್ಲಿರುವುದನ್ನು ತರಗತಿಯಲ್ಲಿ ಕೇವಲ ಬೋಧಿಸುವ ಶಿಕ್ಷಕರಿಗಿಂತ ವಿದ್ಯಾರ್ಥಿಗಳಿಗೆ ಪಠ್ಯದ ಬಗ್ಗೆ ಆಸಕ್ತಿ, ಸ್ಫೂರ್ತಿ ತುಂಬುವ ಶಿಕ್ಷಕರು ಸದಾ ನೆನಪಿನಲ್ಲಿರುತ್ತಾರೆ ಎಂದರು.

ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಹೂಮಳೆ ಸುರಿಸಿ ಸ್ವಾಗತಿಸಿ, ಸತ್ಕರಿಸಲಾಯಿತು. ಹಲವು ಹಳೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಾಲೆಯಲ್ಲಿದ್ದ ಅವಧಿಯಲ್ಲಿನ ಘಟನಾವಳಿಗಳನ್ನು ಮೆಲುಕು ಹಾಕಿದರು. ನಿಧನರಾದ ನಿವೃತ್ತ ಶಿಕ್ಷಕರಾದ ಮಹದೇವಪ್ಪ, ತಿಮ್ಮಪ್ಪ ಹಾಗೂ ಸಹಪಾಠಿಗಳ ಆತ್ಮಕ್ಕೆ ಶಾಂತಿ ಕೋರಲು ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

ನಿವೃತ್ತ ಶಿಕ್ಷಕರಾದ ಮಲ್ಲಪ್ಪ, ಯು.ಎಂ.ತ್ಯಾವರೆ, ಹನುಮಂತಪ್ಪ, ಡಿಸೋಜಾ, ಹಳೇ ವಿದ್ಯಾರ್ಥಿಗಳಾದ ಹೊಳೆಸಿರಿಗೆರೆ ಉಪನ್ಯಾಸಕ ಎ.ಎಸ್.ಜಗದೀಶ್, ಎಸ್.ಕೆ.ರಾಜು, ಮಹದೇವಪ್ಪ, ಗುರುಮೂರ್ತಿ, ಶಿರಾ ತಾಲೂಕಿನ ಗುಳಿಗೆನಹಳ್ಳಿ ಪ್ರೌಢಶಾಲಾ ಉಪ ಪ್ರಾಚಾರ್ಯೆ ಬಿ.ಜೆ.ಗಿರಿಜಾಂಬಾ, ಎಲೆಕ್ಟ್ರಿಕಲ್ ಶಾಪ್ ತಿಪ್ಪೇಸ್ವಾಮಿ, ಚನ್ನಪ್ಪ ಚನ್ನೇಗೌಡ್ರ, ನೀಲಪ್ಪ, ನಾಗೇಂದ್ರಪ್ಪ, ಶ್ರೀಧರ, ಮಂಜನಾಯ್ಕ, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ, ಗೀತಮ್ಮ, ಅಮೃತ್ ಆರ್ಗ್ಯಾನಿಕ್ ಫರ್ಟಿಲೈಜರ್ ಕಂಪನಿ ಅಧಿಕಾರಿ ಜಯಣ್ಣ, ನೀಲಪ್ಪ ಶಾಮಿಯಾನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net