ಹರಿಹರದಲ್ಲಿ ಸಿಹಿ ಭೋಜನ ಸವಿದು ಸಂಭ್ರಮ

Harihara, full moon, worship,
Published on

ಹರಿಹರ: ಮುಂಗಾರು ಮುಗಿದು ಹಿಂಗಾರು ಬರಮಾಡಿಕೊಳ್ಳುವ ಹಬ್ಬ ಸೀಗೆ ಹುಣ್ಣಿಮೆಯನ್ನು ತಾಲೂಕಿನ ಗ್ರಾಮಗಳಲ್ಲಿ ರೈತ ಸಮೂಹ ಗುರುವಾರ ಭಕ್ತಿಭಾವದಿಂದ ಆಚರಿಸಿತು.

ತಾಲೂಕಿನ ವಿವಿಧ ಗ್ರಾಮಗಳ ತೋಟಗಳಲ್ಲಿ ಅಡಕೆ ಮರಕ್ಕೆ ಚಪ್ಪರ ಹಾಕಿ, ಸೀರೆ ಉಡಿಸಿ, ಉಡಿ ತುಂಬಿ ಪೂಜೆ ಸಲ್ಲಿಸಿ ವಿವಿಧ ಆಹಾರ ಪದಾರ್ಥಗಳ ನೈವೇದ್ಯ ಸಲ್ಲಿಸಿದರು. ಬಳಿಕ ತೋಟದ ತುಂಬ ಚರಗ ಚೆಲ್ಲಿ ಭೂ ತಾಯಿಗೆ ನಮಿಸಿದರು. ಮನೆಯಿಂದ ತಂದ ಸಿಹಿ ತಿನಿಸುಗಳನ್ನು ಸವಿದರು.

ಹನಗವಾಡಿ ಗ್ರಾಮದಲ್ಲಿ ಸೀಗೆ ಹುಣ್ಣಿಮೆ ಅಂಗವಾಗಿ ಉಡುಸಲಾಂಬಿಕೆ ದೇವಿಗೆ ವಿಶೇಷ ಪೂಜೆ ಹೋಮ ಸಲ್ಲಿಸಲಾಯಿತು. ಭಕ್ತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಭೂ ತಾಯಿ ಫಸಲು ಹೊತ್ತು ನಿಂತಿರುವ ಸಮಯದಲ್ಲಿ ಸೀಗೆ ಹುಣ್ಣಿಮೆ ಆಚರಿಸಲಾಗುತ್ತದೆ. ಮಳೆ ಆತಂಕದ ನಡುವೆಯೂ ರೈತರು ಭೂದೇವಿಗೆ ಪೂಜೆ ಸಲ್ಲಿಸಿ ಸಮೃದ್ಧ ಬೆಳೆಗೆ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net