

ಹರಿಹರ: ಕೆಎಚ್‌ಬಿ ಕಾಲನಿಯ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿರುವ ಗಿಡ ಗಂಟೆಗಳ ತೆರವು ಹಾಗೂ ಚರಂಡಿಗಳು ಸ್ವಚ್ಛತೆಗೆ ಕ್ರಮ ಕೈಗೊಳ್ಳಲು ನಗರಸಭೆ ಉಪಾಧ್ಯಕ್ಷರಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ಇತ್ತೀಚೆಗೆ ಮನವಿ ಮಾಡಿತು.
ನಗರದ ಕೆಎಚ್‌ಬಿ ಕಾಲೋನಿಯ ಚೌಡಮ್ಮ ದೇವಸ್ಥಾನದಲ್ಲಿ ಕೆಎಚ್‌ಬಿ ಕಾಲನಿ ನಾಗರಿಕ ಹಿತರಕ್ಷಣಾ ಸಮಿತಿ ಪ್ರತಿಷ್ಠಾಪನೆ ಮಾಡಿರುವ ಗಣೇಶನ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉಪಾಧ್ಯಕ್ಷ ಎಂ.ಜಂಬಣ್ಣ ಅವರನ್ನು ಸನ್ಮಾನಿಸಿದ ನಂತರ ಕಾಲನಿಯ ಹಲವು ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ ನಿವಾರಣೆಗೆ ಕ್ರಮ ವಹಿಸಲು ಮನವಿ ಮಾಡಲಾಯಿತು.
ಈ ವೇಳೆ ಸಮಿತಿಯ ಅಧ್ಯಕ್ಷ ಎಚ್.ನಿಜಗುಣ ಮಾತನಾಡಿ, ಕೆಎಚ್‌ಬಿ ಕಾಲನಿ ನಗರಸಭೆಗೆ ಸೇರ್ಪಡೆಯಾದ ನಂತರ ಅನೇಕ ಮನೆಗಳು ನಿರ್ಮಾಣವಾಗಿ ಎಲ್ಲರೂ ಪ್ರಾಮಾಣಿಕವಾಗಿ ನೀರು ಮತ್ತು ಮನೆ ತೆರಿಗೆ ಕಟ್ಟುತ್ತಿದ್ದಾರೆ. ಆದರೆ, ನಗರಸಭೆಯಿಂದ ಸಿಗಬೇಕಾದ ಮೂಲಸೌಕರ್ಯಗಳು ಮಾತ್ರ ಮರೀಚಿಕೆಯಾಗಿವೆ ಎಂದು ಬೇಸರಪಟ್ಟರು.
ಚರಂಡಿಗಳು ಹೂಳು ತುಂಬಿಕೊಂಡು ಗಬ್ಬುವಾಸನೆ ಬೀರುತ್ತಿವೆ. ಒಳಚರಂಡಿ ವ್ಯವಸ್ಥೆಯೂ ಹದಗೆಟ್ಟಿದೆ. ರಸ್ತೆ ಇಕ್ಕೆಲ ಪೊದೆ ಬೆಳೆದು ವಿಷಜಂತುಗಳ ಕಾಟದಿಂದ ಬೇಸತ್ತಿದ್ದಾರೆ. ರಾತ್ರಿ ವೇಳೆ ಭಯದಲ್ಲಿ ಓಡಾಡುವಂತಾಗಿದೆ. ಹಗಲಲ್ಲಿ ದೀಪಗಳು ಉರಿಯುತ್ತಿರುತ್ತವೆ.
ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಮೊಳಕಾಲುದ್ದ ಗುಂಡಿಗಳು ಬಿದ್ದು ಮಳೆ ಬಂತೆಂದರೆ ಗದ್ದೆಗಳಂತಾಗುತ್ತವೆ. ವಾಹನ ಸಂಚಾರ ದುಸ್ತರವಾಗಿದೆ. ಗುಂಡಿಗಳನ್ನಾದರೂ ಮುಚ್ಚಿಸುವ ಕೆಲಸ ನಗರಸಭೆಯಿಂದಾಗಲಿ ಎಂದು ಸಮಿತಿಯ ಹಲವು ಸದಸ್ಯರು ಮನವಿ ಮಾಡಿಕೊಂಡರು.
ಎಲ್ಲ ಸಮಸ್ಯೆಗಳನ್ನು ಆಲಿಸಿದ ಉಪಾಧ್ಯಕ್ಷ ಎಂ.ಜಂಬಣ್ಣ ಮಾತನಾಡಿ, ಹಿರಿಯ ಆರೋಗ್ಯ ನಿರೀಕ್ಷಕ ಹಾಗೂ ಒಳಚರಂಡಿ ನಿರ್ವಹಿಸುವ ಸಿಬ್ಬಂದಿಗೆ ದೂರವಾಣಿ ಕರೆ ಮಾಡಿ ಸೋಮವಾರದಿಂದ ರಸ್ತೆ ಇಕ್ಕೆಲ ಗಿಡಗಳನ್ನು ತೆರವು ಮಾಡಬೇಕು ಹಾಗೂ ಒಳಚರಂಡಿ ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಬೇಕೆಂದು ಸೂಚಿಸಿದರು.
ಹಂತ ಹಂತವಾಗಿ ವಾರ್ಡಿನ ಸಮಸ್ಯೆಗಳ ನಿವಾರಣೆಗೆ ಸದಸ್ಯರಾದ ದಿನೇಶ್ ಬಾಬು ಹಾಗೂ ನಗರಸಭಾಧ್ಯಕ್ಷೆ ಕವಿತಾ ಬೇಡರ ಮತ್ತು ನಾನು ಸೇರಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಸಮಿತಿ ಸದಸ್ಯರಾದ ಆರ್.ಕಾಂತರಾಜ್, ವೀರಣ್ಣ ಯಾದವಾಡ, ಜಿ.ಕೆ. ಮಲ್ಲಿಕಾರ್ಜುನ್, ಪರಶುರಾಮ್ ಗೌಳಿ, ರಾಮಮೂರ್ತಿ, ಸತೀಶ್ ಹುಲಸೋಗಿ, ಶ್ರೀನಿವಾಸ್ ರೆಡ್ಡಿ ಇತರರಿದ್ದರು.