

ಹರಿಹರ: ಇಟ್ಟಿಗೆ ಭಟ್ಟಿ ಕೆಲಸದ ನಿಮಿತ್ತ ಶಾಲೆ ಬಿಟ್ಟು ಪಾಲಕರೊಂದಿಗೆ ಬಂದ 67 ಮಕ್ಕಳನ್ನು ವಲಸೆ ಕಾರ್ಡ್ ಆಧರಿಸಿ ಸಮೀಪದ ಶಾಲೆಗಳಿಗೆ ದಾಖಲಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ.ಸಿದ್ದಪ್ಪ ಹೇಳಿದರು.
ಹರಿಹರದ ಗುತ್ತೂರಿನ ಹೊರವಲಯದ ಉಡಸಲಮ್ಮ ದೇವಸ್ಥಾನದ ಆವರಣದಲ್ಲಿ ಬುಧವಾರ ತಾಲೂಕು ಆಡಳಿತದಿಂದ ಇಟ್ಟಿಗೆ ಭಟ್ಟಿ ಮಾಲಿಕರಿಗೆ ಮತ್ತು ಕಾರ್ಮಿಕರಿಗೆ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಬಗ್ಗೆ ಹಮ್ಮಿಕೊಂಡಿದ್ದ ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮೀಕ್ಷೆ ಪ್ರಕಾರ ಗುತ್ತೂರು 27, ಸಾರಥಿ 8, ಪಾಮೇನಹಳ್ಳಿ 12, ಹಲಸಬಾಳು 14, ತಿಮ್ಮಲಾಪುರ 3, ಹರಗನಹಳ್ಳಿ ಗ್ರಾಮದ 3 ಸೇರಿ ಒಟ್ಟು 67 ವಿದ್ಯಾರ್ಥಿಗಳನ್ನು ಗುರುತಿಸಲಾಗಿದ್ದು, ಈ ಎಲ್ಲಾ ಮಕ್ಕಳನ್ನು ಸಮೀಪದ ಗ್ರಾಮಗಳ ಶಾಲೆಗಳಿಗೆ ವಯಸ್ಸು ಹಾಗೂ ವಲಸೆ ಕಾರ್ಡ್ ಆಧರಿಸಿ ದಾಖಲಾತಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರತಿ ವರ್ಷ ತಾಲೂಕಿನ ವಿವಿಧಡೆ ಇರುವ ಇಟ್ಟಿಗೆ ಭಟ್ಟಿಗಳಿಗೆ ವಿಜಾಪೂರ, ರಾಯಚೂರು, ಗದಗ, ಬಾಗಲಕೋಟೆ, ಗುಲ್ಬರ್ಗ, ಹರಪನಹಳ್ಳಿ ಹೀಗೆ ವಿವಿಧ ಜಿಲ್ಲೆಗಳಿಂದ ಕಾರ್ಮಿಕರು ಕುಟುಂಬ ಸಮೇತ ವಲಸೆ ಬರುತ್ತಾರೆ. ಇದರಿಂದ ಮಕ್ಕಳ ಶಿಕ್ಷಣ ಅರ್ಧಕ್ಕೇ ಮೊಟಕುಗೊಳ್ಳಲಿದೆ. ಹೀಗಾಗಿ ಶಿಕ್ಷಣ ಇಲಾಖೆ ಇಟ್ಟಿಗೆ ಭಟ್ಟಿಗಳ ಸಮೀಕ್ಷೆ ನಡೆಸಿ ಶಾಲೆ ಬಿಟ್ಟ ಮಕ್ಕಳ ಮಾಹಿತಿ ಸಂಗ್ರಹಿಸಿತ್ತು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಶರಣ ಕುಮಾರ್ ಹೆಗಡೆ ಮಾತನಾಡಿ, ಬೆಂಗಳೂರಿನ ಮಾರುತಿ ಮೆಡಿಕಲ್ಸ್ ಮಾಲೀಕ ಮಹೇಂದ್ರ ಮುಣೋತ್ ಎಂಬುವರು ಈಗಾಗಲೆ 24 ಸಾವಿರ ನೋಟ್‌ಬುಕ್‌ಗಳನ್ನು ನೀಡಿದ್ದು, ಇಟ್ಟಿಗೆ ಭಟ್ಟಿ ಮಕ್ಕಳು ಸೇರಿದಂತೆ ತಾಲೂಕಿನ ವಿವಿಧ ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ವಿತರಿಸಲಾಗಿದೆ. ಮತ್ತಷ್ಟು ದಾನಿಗಳನ್ನು ಸಂಪರ್ಕಿಸಿ ಬ್ಯಾಗ್, ಸಮವಸ್ತ್ರ, ಲೇಖನ ಸಾಮಗ್ರಿಗಳನ್ನು ಶೀಘ್ರದಲ್ಲೇ ಒದಗಿಸಲಾಗುವುದು ಎಂದರು.
ಉಪ ತಹಸೀಲ್ದಾರ್ ಶಶಿಧರಯ್ಯ, ನಗರಸಭೆ ಪೌರಾಯುಕ್ತೆ ಎಸ್.ಲಕ್ಷ್ಮಿ, ಸ್ಥಳೀಯ ಕಾರ್ಮಿಕ ನಿರೀಕ್ಷಕಿ ಕವಿತ, ಸಿಡಿಪಿಒ ನಿರ್ಮಲ, ಎಸಿಡಿಪಿಒ ಪ್ರಿಯದರ್ಶಿನಿ, ಬಿಆರ್‌ಸಿ ಜಗದೀಶ್, ಪಿಡಿಒ ವಿಜಯಲಕ್ಷ್ಮಿ, ವಿವಿಧ ಇಲಾಖೆ ಅಧಿಕಾರಿಗಳು, ಇಟ್ಟಿಗೆ ಭಟ್ಟಿ ಮಾಲೀಕರು ಇದ್ದರು.
ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು 1986ರ ರಾಷ್ಟ್ರೀಯ ಶಿಕ್ಷಣ ಕಾಯ್ದೆ ಅನ್ವಯ ಕೆಲಸಕ್ಕೆ ನಿಯೋಜಿಸುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಇಂತಹ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡ ಮಾಲೀಕರಿಗೆ 20 ರಿಂದ 50 ಸಾವಿರ ರೂ. ದಂಡ, 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
- ಪ್ರಸನ್ನಕುಮಾರ್, ಕಾರ್ಮಿಕ ನಿರೀಕ್ಷಕ.