

ಹರಿಹರ: ಮಾಘ ಮಾಸದ ಶುಕ್ಲ ಭಾರತ ಹುಣ್ಣಿಮೆಯಂದು (ಫೆ.9) ನಡೆಯಲಿರುವ ಕ್ಷೇತ್ರನಾಥ ಶ್ರೀ ಹರಿಹರೇಶ್ವರ ಸ್ವಾಮಿ ಬ್ರಹ್ಮರಥೋತ್ಸವಕ್ಕೆ ನಗರ ಸಜ್ಜಾಗಿದೆ.
ಅಂದು ದೇವಾಲಯಕ್ಕೆ ದಾಸರು ಆಗಮಿಸದ ಕೂಡಲೇ ಪಲ್ಲಕ್ಕಿಯಲ್ಲಿ ಶ್ರೀ ಹರಿಹರೇಶ್ವರ ಸ್ವಾಮಿ ಉತ್ಸವ ಮೂರ್ತಿ ಕರೆ ತಂದು ತೇರುಗಡ್ಡೆ ವೃತ್ತದಲ್ಲಿರುವ ರಥದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ನೆರೆದ ಭಕ್ತರ ಸಮ್ಮುಖದಲ್ಲಿ ಬೆಳಗ್ಗೆ 10.45ಕ್ಕೆ ಬ್ರಹ್ಮ ರಥೋತ್ಸವ ನೆರವೇರಲಿದೆ.
ಫೆ.10 ರಂದು ಸ್ಥಾಪಿತ ದೇವತಾ ಪೂಜೆ, ನಂದಿ ಕಂಕಣ, ಧ್ವಜ ವಿಸರ್ಜನೆ, ಅವಭೃತ ಸ್ನಾನಗಳೊಂದಿಗೆ ಉತ್ಸವಾದಿಗಳು ಪೂರ್ಣಗೊಳ್ಳಲಿವೆ. ಈ ಬಾರಿ ವಿಶೇಷವಾಗಿ ಸಂಜೆ 6.30ಕ್ಕೆ ದೇವಾಲಯದ ಆವರಣದಲ್ಲಿ ಸಂಕರ್ಷಣ, ನೃತ್ಯ ಮತ್ತು ಸಂಗೀತ ಕಲಾ ಕೇಂದ್ರದಿಂದ ಭರತನಾಟ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಫೆ.4 ರಿಂದಲೇ ದೇವಾಲಯದಲ್ಲಿ ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಿವೆ. ಶುಕ್ರವಾರ ಬೆಳಗ್ಗೆ ಅಶ್ವೋತ್ಸವ, ಕಲ್ಯಾಣೋತ್ಸವ ನಡೆದವು. ಶನಿವಾರ ಗಜೋತ್ಸವ ನಡೆಯಲಿದೆ.
ಜಾನುವಾರು ಜಾತ್ರೆ: ಭ್ರಹ್ಮ ರಥೋತ್ಸವ ವೇಳೆ ತುಂಗಭದ್ರಾ ನದಿಯ ಸಂಗಮೇಶ್ವರ ದೇವಾಲಯ ಆವರಣದಲ್ಲಿ ನಡೆಯುತ್ತಿದ್ದ ಜಾನುವಾರು ಜಾತ್ರೆ ಕಾರಣಾಂತರ ಹಲವು ವರ್ಷಗಳ ಕಾಲ ಸ್ಥಗಿತಗೊಂಡಿತ್ತು. ಕಳೆದ ವರ್ಷ ಮಹಜೇನಹಳ್ಳಿ ಹಾಗೂ ಕಸಬಾ ರೈತರು ಪುನಾರಂಭಿಸಿದ್ದಾರೆ. ಗುಜರಾತಿನ ಗೀರ್, ಮಹಾರಾಷ್ಟ್ರದ ಕಿಲ್ಲಾರಿ, ಆಂಧ್ರದ ಉಂಗಲ್, ಕರ್ನಾಟಕದ ಅಮೃತ್ ಮಹಲ್, ಹಳ್ಳಿಕಾರ್ ಮತ್ತಿತರ ದೇಸೀ ತಳಿಗಳು ಭಾಗವಹಿಸಲಿವೆ.