ಲಲಿತಮ್ಮನ ಜೀವನ ಉದಯೋನ್ಮುಖ ಬರಹಗಾರರಿಗೆ ಸ್ಫೂರ್ತಿ

harihara
Published on

ಹರಿಹರ: ಶ್ರೀಮತಿ ಲಲಿತಮ್ಮನವರ ಜೀವನ ಇಂದಿನ ಉದಯೋನ್ಮುಖ ಬರಹಗಾರರಿಗೆ ಸ್ಫೂರ್ತಿಯಾಗಲಿದೆ ಎಂದು ಹಿರಿಯ ಸಾಹಿತಿ ಬಾ.ಮ. ಬಸವರಾಜಯ್ಯ ಅಭಿಪ್ರಾಯಪಟ್ಟರು.

ನಗರದ ಶ್ರೀ ಹರಿಹರೇಶ್ವರ ಸಭಾಭವನದಲ್ಲಿ ಇತ್ತೀಚೆಗೆ ಪ್ರಗತಿಪರ ಬರಹಗಾರರ ಒಕ್ಕೂಟ ಮತ್ತು ಚಿಂತನ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶ್ರೀಮತಿ ಲಲಿತಮ್ಮ ಡಾ.ಚಂದ್ರಶೇಖರ್ ಜೀವಮಾನ ಸಾಧನೆ 2024ರ ಪ್ರಶಸ್ತಿ ಸ್ವೀಕರಿಸಿ, ಮಾತನಾಡಿದರು.

ಶ್ರೀಮತಿ ಲಲಿತಮ್ಮನವರು ಓರ್ವ ಗೃಹಿಣಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಮಾಡಿರುವುದು ನಿಜಕ್ಕೂ ಅಪರೂಪದ ಸಂಗತಿ. ದಾವಣಗೆರೆ ಜಿಲ್ಲೆಯ ಸಾಹಿತ್ಯ ಕ್ಷೇತ್ರದ ಮೇರುವ್ಯಕ್ತಿತ್ವದ ಲಲಿತಮ್ಮ ಅವರನ್ನು ದೊಡ್ಡವ್ವ ಮತ್ತು ಟಿ. ಗಿರಿಜಾ ಅವರನ್ನು ಸಣ್ಣವ್ವ ಎಂದು ಸಂಭೋದಿಸುವ ಸೌಭಾಗ್ಯ ನನ್ನದಾಗಿದೆ ಎಂದರು.

ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಶಾರದೇಶಾನಂದಜಿ ಮಹಾರಾಜ್ ಮಾತನಾಡಿ, ಒಂದು ಊರಿನ ಸಂಪತ್ತು ಕೇವಲ ಅಲ್ಲಿರುವ ಭೌತಿಕ ವಸ್ತುಗಳಿಂದ ಅಳೆಯಲು ಸಾಧ್ಯವಿಲ್ಲ. ಅಳೆಯುವುದಾದರೆ ಬೌದ್ಧಿಕ ಸಂಪತ್ತಿನಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ದಾವಣಗೆರೆ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಲಲಿತಮ್ಮನಂಥವರ ಹಿರಿಯ ಜೀವ ನಮ್ಮೊಂದಿಗಿರುವುದೇ ದೊಡ್ಡ ಸೌಭಾಗ್ಯ. ಅವರು ದಾವಣಗೆರೆ ಜಿಲ್ಲೆಯ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಸಾಧನೆಯೇ ನಮ್ಮೆಲ್ಲರಿಗೂ ಆದರ್ಶವಾಗಲಿ ಎಂದು ಆಶಿಸಿದರು.

ಜಿಲ್ಲಾಮಟ್ಟದ ಕವಿಗೋಷ್ಠಿ ಉದ್ಘಾಟಿಸಿದ ಪತ್ರಕರ್ತ ಬಿ.ಎನ್.ಮಲ್ಲೇಶ್ ಮಾತನಾಡಿ, ಕವಿಯಾದವನಿಗೆ ಸದಾ ಅಂತಃಕರಣ ಮಿಡಿಯುತ್ತಿರಬೇಕು. ತನ್ನ ಸುತ್ತಮುತ್ತಲೂ ಏನಾಗುತ್ತಿದೆ ಎನ್ನುವಂತಹ ಅರಿವಿರಬೇಕು. ಪ್ರಕೃತಿಯಲ್ಲಿ ಆಗುತ್ತಿರುವ ವಿಕೋಪಗಳು ಕೂಡ ಒಬ್ಬ ಸ್ಪಂದನಾಶೀಲ ಕವಿಗೆ ವಸ್ತುವಾಗಬೇಕು. ಈ ನಿಟ್ಟಿನಲ್ಲಿ ಉದಯೋನ್ಮುಖ ಕವಿಗಳು ಸಾಗಬೇಕಿದೆ ಎಂದು ಕಿವಿಮಾತು ಹೇಳಿದರು.

ಪ್ರೊ.ಸಿ.ವಿ.ಪಾಟೀಲ್ ಮಾತನಾಡಿ, ಲಲಿತಮ್ಮ ನಿಜಕ್ಕೂ ಸಾಹಿತ್ಯ ಕ್ಷೇತ್ರದ ದೊಡ್ಡಮ್ಮ. ಅವರು ಜೀವನದುದ್ದಕ್ಕೂ ಲೇಖಕರು, ಬರಹಗಾರರು, ಕವಿಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿರುವುದು ನಮ್ಮ ಕಣ್ಣ ಮುಂದಿದೆ ಎಂದು ತಿಳಿಸಿದರು.

ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷೆ ಶ್ರೀಮತಿ ಲಲಿತಮ್ಮ ಡಾ.ಚಂದ್ರಶೇಖರ್ ಮಾತನಾಡಿದರು. ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ 31 ಕವಿಗಳು ಸ್ವರಚಿತ ಕವನಗಳನ್ನು ವಾಚನ ಮಾಡಿದರು.

ಒಕ್ಕೂಟದ ಗೌರವಾಧ್ಯಕ್ಷ ಎಚ್.ಕೆ. ಕೊಟ್ರಪ್ಪ, ಮುಖಂಡರಾದ ಗೋವಿಂದರೆಡ್ಡಿ, ಪ್ರಶಸ್ತಿ ಪ್ರಾಯೋಜಕಿ ವಸಂತಿ ಫ್ರಾನ್ಸಿಸ್, ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ನಾಡಿಗೇರ್, ಕಾರ್ಯದರ್ಶಿ ಡಾ.ಡಿ.ಫ್ರಾನ್ಸಿಸ್, ಗಾಯತ್ರಿ, ನಾಗರತ್ನ, ಸೌಮ್ಯ, ಈ.ಉಷಾ, ಮಂಜುನಾಥ ಅಗಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net