ಸೈನ್ಯದಲ್ಲಿ ಸಲ್ಲಿಸಿದ ಸೇವೆ ಆತ್ಮತೃಪ್ತಿ ನೀಡಿದೆ

HRR YODHA 07
Published on

ಹರಿಹರ: ಸೈನ್ಯದಲ್ಲಿ ಸಲ್ಲಿಸಿದ ಸೇವೆ ಆತ್ಮತೃಪ್ತಿ ನೀಡಿದೆ ಎಂದು ಹರಿಹರ ವಿಜಯನಗರ ಬಡಾವಣೆ ನಿವಾಸಿ, ಭಾರತೀಯ ಸೇನೆಯಲ್ಲಿ ಸೇವಾ ನಿವೃತ್ತಿ ಹೊಂದಿದ ಜಿ.ಎನ್. ಕೊಟ್ರೇಶ್ ಹೇಳಿದರು.

ನಗರದ ಗಾಂಧಿ ಮೈದಾನದಲ್ಲಿ ಸಾಯಿ ತಂಡದಿಂದ ಬುಧವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, 2004ರಿಂದ ಇಲ್ಲಿವರೆಗೆ 17 ವರ್ಷಗಳ ಕಾಲ ಸೈನ್ಯದಲ್ಲಿದ್ದೆ. ಲಾನ್ಸ್ ನಾಯಕ್ ಸ್ಥಾನ ಪಡೆದು ನಿವೃತ್ತಿ ಹೊಂದಿದ್ದೇನೆ ಎಂದು ತಿಳಿಸಿದರು.

ಬಾಲ್ಯದಿಂದಲೂ ದೇಶಸೇವೆ ಮಾಡುವ ಅಭಿಲಾಷೆ ಇತ್ತು. ಪಾಲಕರ ಪ್ರೋತ್ಸಾಹದಿಂದ ಸೈನ್ಯ ಸೇರಿದೆ. 17 ವರ್ಷಗಳ ಸೇವೆ ಅದ್ಭುತ ಅನುಭವ ನೀಡಿದೆ. ಪಾಕ್‌ಗಡಿಯ ಜಮ್ಮು ಮತ್ತು ಕಾಶ್ಮೀರ, ಚೀನಾಗಡಿ, ಭೂತಾನ್, ಪಂಜಾಬ್, ರಾಜಸ್ಥಾನ ಸೇರಿ ನಾನಾ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದೇನೆ ಎಂದರು.

ಅತಿಯಾದ ಚಳಿ, ಬಿಸಿಲು, ಗಾಳಿಯಲ್ಲಿ ಹಗಲು, ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುವುದರಿಂದ ಸೈನಿಕರಲ್ಲಿ ದೈಹಿಕ, ಮಾನಸಿಕ ಸದೃಢತೆ ಬೆಳೆಸುತ್ತದೆ. ಯುವಜನಾಂಗ ಸೇನೆಯಲ್ಲಿ ಸೇವೆ ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಋಣಗಳ ಪೈಕಿ ತಾಯಿ ನಾಡು ಖುಣವೂ ಪ್ರಮುಖವಾದದ್ದು ಎಂದರು.

ನಿವೃತ್ತ ಯೋಧ ಕೊಟ್ರೇಶ್ ಅವರ ಪತ್ನಿ ಮಾನಸಿ ಮಾತನಾಡಿ, ಮನೆ ಯಜಮಾನರು ಮನೆಯಲ್ಲಿ ಇಲ್ಲದಿರುವ ಬಗ್ಗೆ ಯಾವತ್ತೂ ಯೋಚಿಸಲಿಲ್ಲ. ದೇಶ ಸೇವೆಗಾಗಿ ಮನೆಯ ಸಮಯವನ್ನು ಮೀಸಲಿಟ್ಟಿದ್ದಕ್ಕೆ ಕುಟುಂಬಸ್ಥರೆಲ್ಲರಿಗೆ ಖುಷಿ ತಂದಿದೆ. ದೇಶದ್ರೋಹಿ, ಉಗ್ರಗಾಮಿಗಳ ವಿರುದ್ಧದ ಹಲವು ಕಾರ್ಯಾಚರಣೆಗಳಲ್ಲಿ ಭಾಗವಹಿಸಿ ಯಶಸ್ವಿಯಾಗಿರುವುದು ನಮಗೆಲ್ಲ ಹೆಮ್ಮೆಯ ವಿಷಯ ಎಂದರು.

ನಿಂಗರಾಜ್ ದಾವಣಗೆರೆ, ಮಧುಸೂಧನ್, ಮಲ್ಲೇಶ್, ಶ್ರೀರಾಮ್, ನಿಶಾಂತ್, ಮಾರುತಿ, ಕೆ.ಸೃಷ್ಟಿ, ಪರಶುರಾಮ, ಬಸವರಾಜ್, ಭರತ್, ಲಕ್ಷ್ಮಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net