

ಹರಿಹರ: ವೇತನ ಹೆಚ್ಚಳ, ಕಾಯಮಾತಿ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲೂಕು ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟದ ಪದಾಧಿಕಾರಿಗಳು ಸೋಮವಾರ ಗ್ರೇಟ್-2 ತಹಸೀಲ್ದಾರ್ ಡಿ.ಎಂ ಶಶಿಧರಯ್ಯ ಅವರಿಗೆ ಮನವಿ ಸಲ್ಲಿಸಿದರು. ಬಿಸಿಯೂಟ ತಯಾರಿಕರಿಗೆ ಕನಿಷ್ಠ 21 ಸಾವಿರ ರೂ. ವೇತನ ನೀಡಬೇಕು. ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್ ಆದೇಶಿಸಿರುವಂತೆ ಕೆಲಸ ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ಬಿಸಿಯೂಟ ತಯಾರಿಕೆ ಮತ್ತು ಪೂರೈಕೆಯನ್ನು ಖಾಸಗಿ ಸಂಸ್ಥೆಗೆ ನೀಡುವ ನಿರ್ಧಾರ ಕೈಬಿಡಬೇಕು. ಬಿಸಿಯೂಟ ಯೋಜನೆಯನ್ನು ತೆಗೆದು ನಿರಂತರ ಕಾರ್ಯಕ್ರಮ ಎಂಬುದಾಗಿ ಮಾರ್ಪಾಡು ಮಾಡಬೇಕು. ಕಾರ್ಯಕರ್ತೆ ಪದ ಬಳಕೆ ಬಿಟ್ಟು ಕಾರ್ಮಿಕರೆಂದು ಘೋಷಿಸಿ ಕಾರ್ಮಿಕ ಇಲಾಖೆ ವ್ಯಾಪ್ತಿಗೆ ತರಬೇಕು. ವಯೋನಿವೃತ್ತಿಯಾದವರಿಗೆ 2 ಲಕ್ಷ ರೂ. ಇಡಗಂಟು ಮತ್ತು ಮಾಸಿಕ 3 ಸಾವಿರ ನಿವೃತ್ತಿ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.
ಪದಾಧಿಕಾರಿಗಳಾದ ಆವರಗೆರೆ ಚಂದ್ರು, ನೇತ್ರಾವತಿ, ರುದ್ರಮ್ಮ, ನಿರ್ಮಲಾ, ಮಂಗಳಾ, ಉಷಾ, ಮಂಜುಳಾ, ಸರೋಜಾ, ಸೌಭಾಗ್ಯ ಮತ್ತಿತರರಿದ್ದರು.