

ಹರಿಹರ: ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ತಯಾರಿಸುವುದು, ಸಾಹಿತ್ಯಿಕ, ಸಾಂಸ್ಕೃತಿಕ, ಕನ್ನಡ ಭವನ ನಿರ್ಮಿಸಲು ಮತ್ತು ಸಮಗ್ರ ಅಭಿವೃದ್ಧಿಗೆ ಸಂಘಟಿತ ಹೋರಾಟ ರೂಪಿಸಲು ನಗರದ ರಚನಾ ಕ್ರೀಡಾ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ನಾಗರಿಕರು, ಸಾಹಿತ್ಯಾಸಕ್ತರು ಮತ್ತು ಪ್ರಗತಿಪರ ಚಿಂತಕರ ಸಭೆಯಲ್ಲಿ ನಿರ್ಧಾರ ಮಾಡಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಪ್ರೊ.ಸಿ.ವಿ ಪಾಟೀಲ್ ಮಾತನಾಡಿ, ನಿರಂತರವಾಗಿ ಸಾಹಿತ್ಯಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ನಡೆದಾಗ ಮಾತ್ರ ಪ್ರಗತಿಪೂರಕ ಚಿಂತನೆ ಸಾಧ್ಯ. ಆದರೆ, ತಾಲೂಕಿನಲ್ಲಿ ಕಸಾಪ ಮತ್ತಿತರ ಸಾಹಿತ್ಯಪರ ಸಂಘಟನೆಗಳು ನಿಷ್ಕ್ರಿಯಗೊಂಡಿವೆ ಎಂದರು.
ಹರಿಹರಕ್ಕೆ ಮೆಡಿಕಲ್ ಕಾಲೇಜ್ ಬೇಕೆಂಬ ಹೋರಾಟವು ನಡೆಯಿತಾದರೂ ತಾರ್ಕಿಕ ಅಂತ್ಯ ಕಾಣಲಿಲ್ಲ. ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆಗೆ ಅನೇಕ ಹೋರಾಟ ನಡೆಸಲಾಗುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಈಗ ನಿವೃತ್ತ ಇಂಜಿನಿಯರ್ ಮಲ್ಲಿಕಾರ್ಜುನ್ ದೇವರಬೆಳಕೆರೆ ಡ್ಯಾಮ್‌ನಿಂದ ನಗರಕ್ಕೆ ನೀರು ತರಲು ಯೋಜನೆ ರೂಪಿಸಿದ್ದು, ಅದನ್ನು ಅನುಷ್ಠಾನಗೊಳಿಸಲು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಒತ್ತಡ ಹೇರಬೇಕಾಗಿದೆ ಎಂದರು.
ಸಾಹಿತಿ ಪ್ರೊ.ಎಚ್.ಎ. ಭಿಕ್ಷಾವರ್ತಿಮಠ ಮಾತನಾಡಿ, ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆದು ಆರು ತಿಂಗಳಾದರೂ ಸ್ಮರಣ ಸಂಚಿಕೆ ತರಲು ಜಿಲ್ಲಾ ಕಸಾಪ ಅಧ್ಯಕ್ಷರು ತಾತ್ಸಾರದ ಮಾತುಗಳನ್ನಾಡುತ್ತಿದ್ದಾರೆ. ಹಿಂದೆ ಸಾಹಿತ್ಯ, ಕ್ರೀಡಾ ಚಟುವಟಿಕೆಗಳಿಗೆ ಹರಿಹರ ರಾಜ್ಯ ಮಟ್ಟದಲ್ಲಿ ಗುರ್ತಿಸಿಕೊಂಡಿತ್ತು. ಆದರೆ, ಈಗ ತಾಲೂಕಿನಲ್ಲಿ ಅಂತಹ ವಾತಾವರಣ ಕಂಡುಬರುತ್ತಿಲ್ಲ. ಪ್ರಗತಿಪರ ಚಿಂತಕರು ಮತ್ತು ಹೋರಾಟಗಾರರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.
ಹಿರಿಯ ಕ್ರೀಡಾಪಟು ಎಚ್.ನಿಜಗುಣ ಮಾತನಾಡಿ, ನಿದ್ರೆಗೆ ಜಾರಿರುವ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಹೋರಾಟದಿಂದ ಮಾತ್ರ ಎಚ್ಚರಿಸಲು ಸಾಧ್ಯ. ನಗರಕ್ಕೆ ಬೇಕಾದ ಯೋಜನೆಗಳ ಅನುಷ್ಠಾನಕ್ಕೆ ಸಂಘಟಿತ ಹೋರಾಟ ರೂಪಿಸಲಾಗುವುದು ಎಂದರು.
ನಿವೃತ್ತ ಇಂಜಿನಿಯರ್ ಮಲ್ಲಿಕಾರ್ಜುನ್ ಮಾತನಾಡಿ, ಹರಿಹರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಮ್‌ನಿಂದ ನೀರು ತರುವ ಯೋಜನೆಗೆ ನೀಲಿನಕ್ಷೆ ಸಿದ್ಧಪಡಿಸಿದ್ದೇನೆ. ಈಗಾಗಲೇ ಹಾಲಿ- ಮಾಜಿ ಶಾಸಕರು ಮತ್ತು ನಗರದ ಹಿರಿಯರನ್ನು ಸಂಪರ್ಕಿಸಿ ಯೋಜನೆ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದೇನೆ. ಇದು ಸರ್ಕಾರ ಮಟ್ಟಕ್ಕೆ ತಲುಪುವಂಥ ಕೆಲಸವಾದರೆ ಮಾತ್ರ ನಗರದ ನೀರಿನ ಸಮಸ್ಯೆ ನಿವಾರಣೆಯಾಗಲು ಸಾಧ್ಯ ಎಂದರು.
ಸಾಹಿತಿ ಜೆ.ಕಲೀಮ್ ಬಾಷಾ, ಕಾರ್ಮಿಕ ಮುಖಂಡ ಎಚ್.ಕೆ ಕೊಟ್ರಪ್ಪ ಮಾತನಾಡಿದರು. ನಗರಸಭಾ ನಾಮನಿರ್ದೇಶಿತ ಸದಸ್ಯ ಕೆ.ಬಿ ರಾಜಶೇಖರ್, ವಾಣಿಜ್ಯ ಮಂಡಳಿಯ ಪ್ರಧಾನ ಕಾರ್ಯದರ್ಶಿ ಎಚ್. ಬಸವರಾಜಪ್ಪ, ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಗೌರವಾಧ್ಯಕ್ಷ ಸಿದ್ದಲಿಂಗಸ್ವಾಮಿ, ಅಧ್ಯಕ್ಷ ಮೋಹನ್‌ಗೌಡ, ಪರಸ್ಪರ ಬಳಗದ ರಿಯಾಜ್ ಅಹಮದ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಈಶಪ್ಪ ಬೂದಿಹಾಳ, ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ ಕೊಟ್ರೇಶ್, ಕ್ರೀಡಾಪಟು ಜಿ.ಶಂಕರ್, ವಕೀಲರಾದ ಗಣೇಶ್ ದುರ್ಗದ್, ಶ್ರೀನಿವಾಸ ರೆಡ್ಡಿ, ನಾಗರಾಜ್ ಬಿರ್ಲಾ, ಎಚ್.ಸಿ ಕೀರ್ತಿಕುಮಾರ್, ಶೇಖರ್‌ಗೌಡ ಪಾಟೀಲ್, ಟಿ.ಎಂ.ಶಿವಕುಮಾರ್ ಇತರರಿದ್ದರು.