ಉಮ್ರಾ ಯಾತ್ರಾರ್ಥಿಗಳಿಗೆ ಸತ್ಕಾರ, ಬೀಳ್ಕೊಡುಗೆ

Harihar, Umrah yatre
Published on

ಹರಿಹರ: ಪವಿತ್ರ ಮೆಕ್ಕಾ, ಮದೀನಾ ಉಮ್ರಾ ಯಾತ್ರೆಗೆ ಹೊರಟ ಮುಸ್ಲಿಂ ದಂಪತಿಗೆ ಹಿಂದು ಧರ್ಮೀಯರು ಸತ್ಕರಿಸಿ ಬೀಳ್ಕೊಟ್ಟ ಸೌಹಾರ್ದ ಸಾರುವ ಕಾರ್ಯಕ್ರಮ ನಗರದಲ್ಲಿ ಬುಧವಾರ ನಡೆಯಿತು.

ನಗರದ ಜೆ.ಸಿ. ಬಡಾವಣೆಯ ಲೇಬರ್ ಕಾಲನಿಯ ಕಾರ್ಮಿಕ ಮುಖಂಡ ಎಚ್.ಕೆ. ಕೊಟ್ರಪ್ಪರ ಮನೆಯಲ್ಲಿ ಯಾತ್ರಾರ್ಥಿಗಳಾದ ಸೈಯದ್ ಅಜೀಜ್, ನೂರ್ ಜಹಾನ್ ದಂಪತಿ ಮತ್ತವರ ಮೊಮ್ಮಗ ಇರಹಾಂ ಅವರನ್ನು ಸತ್ಕರಿಸಲಾಯಿತು.

ಲೇಖಕ ಜೆ. ಕಲೀಂಬಾಷಾ ಮಾತನಾಡಿ, ಬ್ರಕೀದ್ ಹಬ್ಬದ ವೇಳೆ ಕೈಗೊಳ್ಳುವ 45 ದಿನಗಳ ಯಾತ್ರೆ ಹಜ್ ಯಾತ್ರೆ ಎನಿಸಿಕೊಂಡರೆ, ಬೇರೆ ಅವಧಿಯಲ್ಲಿ 15 ದಿನಗಳ ಅವಧಿಯ ಯಾತ್ರೆಗೆ ಉಮ್ರಾ ಯಾತ್ರೆ ಎನ್ನುತ್ತಾರೆ. ಈ ಸಂದರ್ಭದಲ್ಲಿ ಮೆಕ್ಕಾ ಮತ್ತು ಮದೀನಾ ನಗರಗಳ ಹಾಗೂ ಸುತ್ತಲಿನ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲಾಗುತ್ತದೆ ಎಂದರು.

ಎಚ್.ಕೆ. ಕೊಟ್ರಪ್ಪ ಮಾತನಾಡಿ, ಅನೇಕತೆಯಲ್ಲಿ ಏಕತೆ, ಈ ನೆಲದ ಗುಣ. ಹಾಗಾಗಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳಿಂದ ಉಮ್ರಾ ಯಾತ್ರಿಗಳಿಗೆ ಶುಭ ಕೋರಿ ಕಳಿಸುತ್ತಿರುವುದು ಸೌಹಾರ್ದದ ಸಂಕೇತವಾಗಿದೆ ಎಂದು ಹೇಳಿದರು.

ಕರ್ನಾಟಕ ದಲಿತ ಸಂಘಟನೆ ರಾಜ್ಯ ಸಂಚಾಲಕ ಎಚ್. ಮಲ್ಲೇಶ್, ದಲಿತ ಮುಖಂಡ ಎಸ್.ಎಚ್. ಕೊಟ್ರೇಶ್, ಕವಿತಾ ಸನಾದಿ, ಕನ್ನಡಪರ ಸಂಘಟನೆಯ ಶ್ರೀನಿವಾಸ್ ಕೊಡ್ಲಿ, ಮೊಹಮ್ಮದ್ ಇಲಿಯಾಸ್, ಪ್ರವೀಣ್, ಪತ್ರಕರ್ತ ಕೆ. ಪಂಚಾಕ್ಷರಿ, ಮಹಬೂಬ್ ಅಲಿ ಅದ್ವಾನಿ, ಪರಸ್ಪರ ಬಳಗದ ರಿಯಾಜ್ ಅಹ್ಮದ್, ಚಂದ್ರಮ್ಮ ಕೊಟಗಿ, ಸಮೀರ್, ವಸೀಂ, ಗೌಸ್ ಶುಭ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net