ಮಲೇಬೆನ್ನೂರು ಶಾಲೆ ತೆರವಿಗೆ ಕೆಂಡವಾದ ಶಾಸಕ

Harihar, Taluk Panchayat, Progress Check,
Published on

ಹರಿಹರ: ಶಿಕ್ಷಣ ಇಲಾಖೆಯ ಅನುಮತಿಯಿಲ್ಲದೆ ಶಾಲಾ ಕಟ್ಟಡ ತೆರವು ಮಾಡಿರುವವರಲ್ಲಿ ಡಿಸಿ ಸೇರಿದಂತೆ ಯಾರೇ ಆಗಿರಲಿ ಅವರ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಬೇಕು. ವಿಳಂಬವಾದರೆ ಸಹಿಸಲ್ಲ ಎಂದು ಶಾಸಕ ಬಿ.ಪಿ.ಹರೀಶ್ ಬಿಇಒ, ತಾಪಂ ಇಒಗೆ ಎಚ್ಚರಿಸಿದರು.

ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಕರೆದಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಲೇಬೆನ್ನೂರು ಸರ್ಕಾರಿ ಶಾಲೆಯ ಕಟ್ಟಡ ಕೆಡವಿದ ವಿಷಯ ಪ್ರಸ್ತಾಪಿಸಿದರು.

ಪ್ರಕರಣದ ಬಗ್ಗೆ ಡಿಡಿಪಿಐಗೆ ಮಾಹಿತಿ ನೀಡಲಾಗಿದ್ದು, ಯಾವುದೇ ಪ್ರಕರಣ ದಾಖಲಿಸಿಲ್ಲ ಎನ್ನುವ ಸಿದ್ಧ ಉತ್ತರಕ್ಕೆ ಕೋಪಿತರಾದ ಶಾಸಕರು, ನಿಮ್ಮ ಆಸ್ತಿಯನ್ನು ಯಾರಾದರೂ ಈ ರೀತಿ ಮಾಡಿದ್ದರೆ ಸುಮ್ಮನೆ ಇರುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿದರು.

ಹರಿಹರ ನಗರಸಭೆ ವ್ಯಾಪ್ತಿಯ ಶೇಕಡ 80 ರಷ್ಟು ಬಡಾವಣೆಗಳು ನಿಯಮ ಪ್ರಕಾರ ನಿರ್ಮಾಣವಾಗಿಲ್ಲ. ಇದರ ಪರಿಣಾಮ ನಿವಾಸಿಗಳು ಮನೆಕಟ್ಟಲು ಪರವಾನಗಿ ಸಿಗದೆ ಪರದಾಡುತ್ತಿದ್ದಾರೆ ಎಂದರು.

ಗ್ರಾಮಗಳು ಬೆಳೆದಂತೆ ಗ್ರಾಮ ಠಾಣಾ ವ್ಯಾಪ್ತಿಯು ವಿಸ್ತರಿಸಬೇಕು. ಈ ಕೆಲಸ ಇದುವರೆಗೂ ಆಗಿಲ್ಲ. ಇದರಿಂದ ಅನೇಕ ಸಮಸ್ಯೆಗಳನ್ನು ಸಾರ್ವಜನಿಕರು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ನಗರಸಭೆ, ಕಂದಾಯ ಹಾಗೂ ಸರ್ವೇ ಇಲಾಖೆಯ ಅಧಿಕಾರಿಗಳ ಸಭೆ ನಡೆಸುತ್ತೇನೆ ಎಂದು ತಿಳಿಸಿದರು.

ಕೃಷಿ ಇಲಾಖೆ ನಿರ್ದೇಶಕ ನಾರನಗೌಡ ಮಾತನಾಡಿ, ಜೂನ್, ಜುಲೈನಲ್ಲಿ ವಾಡಿಕೆಯಂತೆ ಶೇಕಡ 16 ರಷ್ಟು ಹೆಚ್ಚುವರಿ ಮಳೆಯಾಗಿದ್ದು, ಬಿತ್ತನೆ ಕಾರ್ಯ ಆರಂಭವಾಗಿದೆ. ರೈತರಿಗೆ ಭತ್ತ, ಮೆಕ್ಕೆಜೋಳ ಮತ್ತಿತರ ಬೀಜ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಾಲೂಕಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಅರಣ್ಯ ಹಾಗೂ ಸಾಮಾಜಿಕ ಆರಣ್ಯ ಇಲಾಖೆಯಿಂದ ಅಂದಾಜು ಎಷ್ಟು ಸಸಿಗಳನ್ನು ನೆಡಲಾಗಿದೆ ಎಂದು ಪ್ರಶ್ನಿಸಿದಾಗ ಇಲಾಖೆಯ ಅಧಿಕಾರಿ ಅಂದಾಜು 90 ಲಕ್ಷ ಇರಬಹುದು ಎಂದು ಉತ್ತರಿಸಿದರು.

ಕಾರ್ಮಿಕ ಇಲಾಖೆಯ ನೋಂದಾಯಿತ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನೆಪದಲ್ಲಿ ರಾಜ್ಯಾದ್ಯಂತ ಕೋಟ್ಯಂತರ ರೂ. ಲೂಟಿಯಾಗಿದೆ ಎನ್ನುವ ಮಾಹಿತಿ ಇದೆ. ಇದರಲ್ಲಿ ಹರಿಹರವು ಸೇರಿದೆಯಾ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ನಿರೀಕ್ಷಕಿ ಕವಿತಾ ತಾಲೂಕಿನಲ್ಲಿ ಅಂದಾಜು 4500 ಸಾವಿರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿರುವ ಮಾಹಿತಿ ಇದೆ, ತಪಾಸಣೆ ವಿಷಯ ತಾಲೂಕು ಮಟ್ಟದ ಅಧಿಕಾರಿಗಳಿಗೆ ಗಮನಕ್ಕೆ ಬಂದಿಲ್ಲ ಎಂದು ಹೇಳುತ್ತಿದ್ದಂತೆ ಮಾಹಿತಿ ಇಲ್ಲ ಅಂದರೆ ಏನು ಅರ್ಥ ಎಂದ ಶಾಸಕರು, ಕೂಡಲೇ ಮೇಲಧಿಕಾರಿಗಳಿಗೆ ಗಮನಕ್ಕೆ ತರುವಂತೆ ಇಒ ರಾಮಕೃಷ್ಣಪ್ಪ ಅವರಿಗೆ ಸೂಚಿಸಿದರು.

ತಹಸೀಲ್ದಾರ್ ಗುರುಬಸವರಾಜ್, ತಾಪಂ ಇಒ ರಾಮಕೃಷ್ಣಪ್ಪ, ಡಾ. ಸಿದ್ದೇಶ್, ಸಿಡಿಪಿಒ ಪೂರ್ಣಿಮಾ, ಬೆಸ್ಕಾಂ ನಾಗರಾಜ್ ನಾಯ್ಕ, ಪಿಡಬ್ಲುೃಡಿ ಶಿವಮೂರ್ತಿ, ಜಿಪಂ ಗಿರೀಶ್, ಆರೋಗ್ಯ ಇಲಾಖೆಯ ಡಾ.ಖಾದರ್, ಸಾರ್ವಜನಿಕ ಆಸ್ಪತ್ರೆ ಡಾ.ಹನುಮನಾಯ್ಕ, ವಾಲ್ಮೀಕಿ ನಿಗಮದ ಮಹಾವೀರ್ ಸಜ್ಜನ್, ನಗರಸಭೆ ಇಎಎ ತಿಪ್ಪೇಶಪ್ಪ ಇತರರಿದ್ದರು.

ರಾಜ್ಯದಲ್ಲಿ ಡೆಂಘೆ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ 3ಕ್ಕೆ ತಹಸೀಲ್ದಾರ್, ತಾಪಂ ಇಒ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳ ಸಭೆ ಮಾಡಲಾಗುವುದು.
l ಬಿ.ಪಿ.ಹರೀಶ್, ಶಾಸಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net