

ಹರಿಹರ: ನಗರದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷಾಚರಣೆ ಹಿನ್ನೆಲೆಯಲ್ಲಿ ಗಣವೇಷಧಾರಿಗಳ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು.
ನಗರದ ಎಸ್ಜೆವಿಪಿ ಕಾಲೇಜು ಮೈದಾನದಿಂದ ಆರಂಭವಾದ ಪಥಸಂಚಲನ ಹಳೇ ಪಿ.ಬಿ.ರಸ್ತೆ, ಕಾಳಿದಾಸನಗರ, ರಾಮ ಮಂದಿರ, ಜೆ.ಸಿ.ಬಡಾವಣೆ, ಶಿವಮೊಗ್ಗ ರಸ್ತೆ, ಹಳ್ಳದಕೇರಿ, ಲದ್ವಾ ಓಣಿ, ವಿರಕ್ತಮಠ, ದೇವಸ್ಥಾನ ರಸ್ತೆ, ಕೋಟೆ, ಶಿಬಾರ ವೃತ್ತ, ದೊಡ್ಡಿ ಬೀದಿ, ಮರಾಠ ಗಲ್ಲಿ, ಮುಖ್ಯರಸ್ತೆ, ಗಾಂಧಿ ವೃತ್ತದ ಮೂಲಕ ಗಾಂಧಿ ಮೈದಾನದಲ್ಲಿ ಅಂತ್ಯಗೊಂಡಿತು.
ಪಥಸಂಚಲನ ಸಾಗಿದ ಮಾರ್ಗದ ಮನೆಗಳ ಮುಂದೆ ಮಾತೆಯರು ಬಣ್ಣ ಬಣ್ಣದ ರಂಗೋಲಿ ಹಾಕಿದ್ದರು. ಕೆಲವರು ಭಗವಾಧ್ವಜ ಹಾಗೂ ಗಣವೇಷಧಾರಿಗಳ ಮೇಲೆ ಹೂವುಗಳನ್ನು ಹಾಕಿ ಸ್ವಾಗತಿಸಿದರೆ, ಉಳಿದವರು ಭಾರತ ಮಾತಾಕಿ ಜೈ, ಆರ್ಎಸ್ಎಸ್ಗೆ ಜಯವಾಗಲಿ ಎಂದು ಘೊಷಣೆ ಕೂಗಿದರು.
ವೀರ ಸಾವರ್ಕರ್, ಸ್ವಾಮಿ ವಿವೇಕಾನಂದ, ಭಾರತ ಮಾತೆ, ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ, ಭಗತ್ ಸಿಂಗ್, ಪ್ರಭು ಶ್ರೀರಾಮನ ವೇಷದಲ್ಲಿ ಮಕ್ಕಳು ಮಿಂಚಿದರು. ಪಥಸಂಚಲನ ಮಾರ್ಗದ ಪ್ರಮುಖ ವೃತ್ತಗಳಲ್ಲಿ ಸ್ಥಳೀಯರು ದೇಶ ಭಕ್ತರ ಭಾವಚಿತ್ರಗಳನ್ನಿಟ್ಟು ಹಾಗೂ ಬಂಟಿಂಗ್ಸ್ ಕಟ್ಟಿ ಅಲಂಕಾರ ಮಾಡುವ ಮೂಲಕ ಸಂಘದ ಕಾರ್ಯಕ್ಕೆ ಬೆಂಬಲ ಸೂಚಿಸಿದರು.
ಪಥಸಂಚಲನದಲ್ಲಿ 5 ವರ್ಷದಿಂದ 60 ವರ್ಷಕ್ಕೂ ಮೇಲ್ಪಟ್ಟ ಸ್ವಯಂ ಸೇವಕರು, ಶಾಸಕ ಬಿ.ಪಿ. ಹರೀಶ್, ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಲಿಂಗರಾಜ್ ಹಿಂಡಸಘಟ್ಟ, ಅಜೀತ್ ಸಾವಂತ್ ಗಣವೇಷದಲ್ಲಿ ಭಾಗಿಯಾಗಿದ್ದರು.
ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಭಗವಾಧ್ವಜಕ್ಕೆ ಹಾಗೂ ಗಣವೇಷಧಾರಿಗಳಿಗೆ ಹೂವುಗಳನ್ನು ಹಾಕುವ ಮೂಲಕ ಶುಭ ಹಾರೈಸಿದ್ದು ವಿಶೇಷವಾಗಿತ್ತು.
ಪ್ರಿಯಾಂಕ್ಗೆ ಅಧಿಕಾರದ ಭ್ರಮೆ: ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಿ.ಪಿ. ಹರೀಶ್, ಸಚಿವ ಪ್ರಿಯಾಂಕ ಖರ್ಗೆ ಅಧಿಕಾರದ ಭ್ರಮೆಯಲ್ಲಿ ಆರ್ಎಸ್ಎಸ್ ನಿಷೇಧದ ಮಾತುಗಳನ್ನಾಡುತ್ತಿದ್ದಾರೆ. ದೇಶದ ಗೌರವ, ಸಂಸ್ಕೃತಿ, ಪರಂಪರೆ ಮತ್ತು ಧರ್ಮದ ರಕ್ಷಣೆ ಮಾಡುತ್ತಿರುವ ಆರ್ಎಸ್ಎಸ್ ಅನ್ನು ನಿಷೇಧ ಮಾಡಬೇಕೆನ್ನುವ ಪ್ರಿಯಾಂಕ ಖರ್ಗೆಯವರಿಗೆ ಪಾಕಿಸ್ತಾನ ಜಿಂದಾಬಾದ್ ಎನ್ನುವವರು ಹಾಗೂ ದೇಶದ ಮೇಲೆ ದಾಳಿ ಮಾಡುವ ಉಗ್ರ ಸಂಘಟನೆಗಳು ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಮುಖಕ್ಕೆ ಮಸಿಬಳಿಯುವ ಕೆಲಸವನ್ನು ಸಚಿವರು ಮಾಡುತ್ತಿದ್ದಾರೆ. ನೀವು ಅವರ ಮಾತಿಗೆ ಕಿವಿ ಕೊಡದೆ ಆರ್ಎಸ್ಎಸ್ ಚಟುವಟಿಕೆಗಳಿಗೆ ಅನುಮತಿ ನೀಡಿ, ಇಲ್ಲವೇ ಪರಿಣಾಮ ಎದುರಿಸಿ ಎಂದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಮಾತನಾಡಿ, ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಹಿಂದು ವಿರೋಧಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿದೆ. ಇದು ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.