

ಹರಿಹರ: ಭದ್ರಾ ಬಲದಂಡೆ ನಾಲೆ ಸೀಳಿ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಗ್ರಾಮಗಳಿಗೆ ನೀರು ಹರಿಸುವ ಅವೈಜ್ಞಾನಿಕ ಕಾಮಗಾರಿಯನ್ನು ವಿರೋಧಿಸಿ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಶುಕ್ರವಾರ ಜೆಡಿಎಸ್ ಪಕ್ಷ ಹರಿಹರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಬಳಿಕ ತಹಸೀಲ್ದಾರ್ ಕೆ.ಎಂ. ಗುರುಬಸವರಾಜ್ ಅವರ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ನಗರದ ನೀರಾವರಿ ಇಲಾಖೆ ಆವರಣದಲ್ಲಿರುವ ಗಣೇಶ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ, ಶಿವಮೊಗ್ಗ ರಸ್ತೆ, ರಾಣಿ ಚನ್ನಮ್ಮ ವೃತ್ತ, ಗಾಂಧಿ ವೃತ್ತದ ಮೂಲಕ ಸಾಗಿ ತಾಲೂಕು ಕಚೇರಿ ಮುಂಭಾಗದಲ್ಲಿ ಅಂತ್ಯಗೊಂಡಿತು. ಮೆರವಣಿಗೆಯುದ್ದಕ್ಕೂ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೊಷಣೆಗಳನ್ನು ಕೂಗಿದರು.
ರೈತರ ಜೀವಕ್ಕೆ ಮರಣ ಶಾಸನ: ಪ್ರತಿಭಟನೆ ವೇಳೆ ಮಾತನಾಡಿದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಗಳ ರೈತರಿಗೆ ನೀರಾವರಿ ಯೋಜನೆ ಹಾಗೂ ಕುಡಿಯುವ ನೀರಿಗಾಗಿ ಭದ್ರಾ ಯೋಜನೆಯನ್ನು ದಶಕಗಳ ಹಿಂದೆ ರೂಪಿಸಲಾಗಿತ್ತು. ಆದರೆ, ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರಿಗೆ ಇಂದಿಗೂ ಸಹ ನೀರು ತಲುಪುತ್ತಿಲ್ಲ ಎನ್ನುವುದನ್ನು ಆಳುವವರು ಅರಿಯಬೇಕು ಎಂದರು.
ಇಂತಹ ಪರಿಸ್ಥಿತಿಯಲ್ಲೂ ನಾಲೆಯನ್ನು ಸೀಳಿ ಪಕ್ಕದ ಜಿಲ್ಲೆಗಳಿಗೆ ಕುಡಿಯುವ ನೀರನ್ನು ನೀಡಬೇಕು ಎನ್ನುವ ಯೋಚನೆಯೇ ಅವೈಜ್ಞಾನಿಕವಾದದ್ದು. ಆದಾಗ್ಯೂ, ರಾಜ್ಯ ಕಾಂಗ್ರೆಸ್ ಸರ್ಕಾರ ಈ ಕಾಮಗಾರಿ ಮಾಡುತ್ತಿರುವುದು ಈ ಭಾಗದ ರೈತರ ಜೀವಕ್ಕೆ ಮರಣ ಶಾಸನ ಬರೆದಂತೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಶೇ.50ರಷ್ಟು ಭ್ರಷ್ಟಾಚಾರ: ಬಿಜೆಪಿ ಸರ್ಕಾರದ ಮೇಲೆ ಶೇ.40 ರಷ್ಟು ಭ್ರಷ್ಟಾಚಾರದ ಆರೋಪ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಇಂದು ಶೇ.50 ರಷ್ಟು ಭ್ರಷ್ಟಾಚಾರದಲ್ಲಿ ತೊಡಗಿದೆ ಎನ್ನುವುದಕ್ಕೆ ಆಡಳಿತ ಪಕ್ಷದ ಶಾಸಕರ ಮಾತುಗಳೇ ಸಾಕ್ಷಿ ಎಂದು ಶಿವಶಂಕರ್ ಹೇಳಿದರು.
ಹಣ ನೀಡಿದವರಿಗೆ ಮಾತ್ರ ಮನೆ, ವಾಲ್ಮೀಕಿ ನಿಗಮದ ಹಗರಣ, ಗುತ್ತಿಗೆದಾರರಿಗೆ ಬಾಕಿ ನೀಡದೆ ವಿಳಂಬ ಮಾಡುತ್ತಿರುವುದು ಸೇರಿದಂತೆ ಎಲ್ಲ ರಂಗಗಳಲ್ಲಿಯೂ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜ್ಯ ಸರ್ಕಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರನ್ನು ಒತ್ತಾಯಿಸಿದರು.
ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ನಗರಸಭಾ ಸದಸ್ಯರಾದ ಬಿ. ಆಲ್ತಾಫ್, ಪಿ.ಎನ್. ವಿರೂಪಾಕ್ಷಿ, ಜೆಡಿಎಸ್ ಮುಖಂಡರಾದ ಎಂ.ಜಿ. ಪರಮೇಶ್ವರ ಗೌಡ್ರು, ಅಂಗಡಿ ಬಸೇಟಪ್ಪ, ಬಾಡಿ ನಾಗರಾಜ್, ಸುರೇಶ್ ಚಂದಾಪೂರ, ಹಾಲಸ್ವಾಮಿ, ಅಡಕೆ ಕುಮಾರ್, ಮುದ್ದಿರಾ ಹನುಮಂತಪ್ಪ, ನವೀನ್ ಕುಮಾರ್, ಮೋಹನ್ ದುರುಗೋಜಿ, ಜಿ. ನಂಜಪ್ಪ, ಕರೇಗೌಡ್ರು, ಬಾನುವಳ್ಳಿ ರುದ್ರೇಶ್, ಶಿವಮೂರ್ತಿ, ಬಿ.ಎಸ್. ರಂಗಪ್ಪ, ಲಕ್ಷ್ಮೀ ಆಚಾರ್, ರಾಗಿಣಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.