ಅಂತರ್​ಜಿಲ್ಲಾ ಬೈಕ್ ಕಳ್ಳರ ಕೈಗೆ ಕೋಳ

Hrr27Crime3
Published on

ದಾವಣಗೆರೆ: ಹರಿಹರ ನಗರ ಠಾಣೆಯ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿ 16.52 ಲಕ್ಷ ರೂ. ಮೌಲ್ಯದ 30 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ದೊಡ್ಡಲಿಂಗನೇಹಳ್ಳಿ ಗ್ರಾಮದ ಪ್ರತಾಪ ಹಾಗೂ ಬಳ್ಳಾರಿ ಜಿಲ್ಲೆಯ ಗದ್ದಿಕೇರೆ ಗ್ರಾಮದ ಬೋಜರಾಜ್ ಬಂಧಿತರು. ಇವರು ದಾವಣಗೆರೆ, ಚಿತ್ರದುರ್ಗ ಸೇರಿ 11 ಜಿಲ್ಲೆಗಳಲ್ಲಿ 30 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

ಆರೋಪಿತರು ಕಳವು ಮಾಡಿದ ಮೋಟಾರ್​ಬೈಕ್​ನಲ್ಲಿ ಹರಿಹರ ನಗರದ ಹರಪನಹಳ್ಳಿ ರಸ್ತೆಯಲ್ಲಿ ಬರುತ್ತಿದ್ದಾಗ ಪೊಲೀಸರು ತಡೆದು ವಿಚಾರಣೆ ನಡೆಸಿದ ವೇಳೆ ಸಿಕ್ಕಿಹಾಕಿಕೊಂಡಿದ್ದಾರೆ.

ಹರಿಹರದ ಹರಿಹರೇಶ್ವರ ನಗರದ ಶ್ರೀಜಿತ್ ಆರ್.ಇಂದಿರಾ ನಗರದ ಶಾಬಾಜ್,ವಿದ್ಯಾನಗರದ ಮಂಜುನಾಥ್ ಹಾಗೂ ನಿತೀಶ್ ಅವರು ಕ್ರಮವಾಗಿ ಮೇ, ಜೂನ್, ಜುಲೈ ತಿಂಗಳಲ್ಲಿ ಬೈಕ್ ಕಳವು ಕುರಿತು ನಗರ ಠಾಣೆಗೆ ದೂರು ನೀಡಿದ್ದರು.

ದೂರು ಆಧರಿಸಿ ಕಾರ್ಯಾಚರಣೆಗೆ ಇಳಿದಿದ್ದ ತನಿಖಾ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ತಾಂತ್ರಿಕ ಹಾಗೂ ಭೌತಿಕ ಸಾಕ್ಷ್ಯ ಸಂಗ್ರಹಿಸಿತ್ತು. ಅಕ್ಟೋಬರ್ 17 ರಂದು ಕಳ್ಳರನ್ನು ಹಿಡಿಯಲು ಯಶಸ್ವಿಯಾಗಿದೆ.

ಆರೋಪಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ 11 ಜಿಲ್ಲೆಗಳಲ್ಲಿ ಬೈಕ್ ಕಳವು ನಡೆಸಿದ್ದು ಬೆಳಕಿಗೆ ಬಂದಿದೆ. ಇವರು ಈ ಹಿಂದೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಗರ ಠಾಣೆ ಹಾಗೂ ಬಾಗಲಕೋಟೆ ಜಿಲ್ಲೆಯ ಹುನಗುಂದ ಠಾಣೆಯಲಿ ಬಂಧನಕ್ಕೆ ಒಳಗಾಗಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸೋಮವಾರ ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲೆಯ -6, ಚಿತ್ರದುರ್ಗ - 6, ಕೊಪ್ಪಳ - 3, ವಿಜಯನಗರ - 5, ಬಾಗಲಕೋಟೆ-3, ಗದಗ- 2, ಹಾವೇರಿ - 1, ಚಿಕ್ಕಮಗಳೂರು- 1, ರಾಮನಗರ 1, ವಿಜಯಪುರ 1, ಚಿಕ್ಕಬಳ್ಳಾಪುರ ಜಿಲ್ಲೆಯ 1 ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿರುವುದು ತನಿಖೆ ವೇಳೆ ತಿಳಿದು ಬಂದಿದಿದೆ.

ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಡಿವೈಎಸ್​ಪಿ ಬಸವರಾಜ್, ಆರ್.ಎಫ್.ದೇಸಾಯಿ, ಶ್ರೀಪತಿ ಗಿನ್ನಿ,ಮಹಮ್ಮದ್ ಜಬೀವುಲ್ಲಾ, ನಾಗರಾಜ ಸುಣಗಾರ, ದಿಲೀಪ್ ಕೆ.ಸಿ, ಶಾಂತರಾಜ್, ಸಿದ್ದೇಶ.ಎಚ್, ಮಂಜುನಾಥ ಕ್ಯಾತಮ್ಮನವರ್, ದೇವರಾಜ ಸೂರ್ವೆ, ರುದ್ರಸ್ವಾಮಿ, ಹನುಮಂತಪ್ಪ ಗೋಪನಾಳ, ರವಿ.ಆರ್,ರಂಗನಾಥ, ರಾಮಚಂದ್ರ ಜಾದವ್, ಶಿವಕುಮಾರ, ರಮೇಶ, ಸಿದ್ಧಾರ್ಥ ಅವರ ಬಗ್ಗೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಠಾಣೆವಾರು ಪ್ರಕರಣಗಳ ವಿವರ

  1. ದಾವಣಗೆರೆ: ಹರಿಹರ ನಗರ, ದಾವಣಗೆರೆ ವಿದ್ಯಾನಗರ, ದಾವಣಗೆರೆ ಕೆಟಿಜೆ ನಗರ
  2. ಚಿತ್ರದುರ್ಗ : ಹೊಸದುರ್ಗ, ಚಿತ್ರದುರ್ಗ ಕೋಟೆ, ಹೊಳಲ್ಕೆರೆ
  3. ಕೊಪ್ಪಳ : ಶಹರ, ಕುಷ್ಟಗಿ
  4. ವಿಜಯನಗರ : ಹರಪನಹಳ್ಳಿ
  5. ಬಾಗಲಕೋಟೆ : ನವನಗರ, ಹುನುಗುಂದ, ಇಳಕಲ್
  6. ಗದಗ : ಮುಂಡರಗಿ
  7. ಹಾವೇರಿ : ಶಹರ
  8. ಚಿಕ್ಕಮಗಳೂರು : ಕಡೂರು
  9. ರಾಮನಗರ : ಕುದೂರು
  10. ವಿಜಯಪುರ : ನಗರ
  11. ಚಿಕ್ಕಬಳ್ಳಾಪುರ : ಟೌನ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net