

ಹರಿಹರ: ಗ್ರಂಥಾಲಯಗಳು ಜ್ಞಾನದ ನೆಲೆಯಾಗಿದ್ದು, ಗ್ರಂಥಪಾಲಕ ಮಾಹಿತಿಯ ಸಂವಾಹಕ ಎಂದು ಶಾಖಾ ಗ್ರಂಥಾಲಯದ ಪ್ರಭಾರ ಗ್ರಂಥಪಾಲಕ ರವಿಕುಮಾರ್ ಅಭಿಪ್ರಾಯಪಟ್ಟರು.
ನಗರದ ಶಾಖಾ ಗ್ರಂಥಾಲಯದಲ್ಲಿ ಸೋಮವಾರ ಗ್ರಂಥಾಲಯ ಪಿತಾಮಹಾ ಪದ್ಮಶ್ರೀ ಪುರಸ್ಕೃತ ಡಾ.ಎಸ್.ಆರ್.ರಂಗನಾಥ್ ಅವರ 132ನೇ ಜಯಂತ್ಯುತ್ಸವ ನಿಮಿತ್ತ ಆಯೋಜಿಸಿದ್ದ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಂಥಾಲಯಗಳಿಗೆ ಒಂದು ಸಾಂಸ್ಥಿಕ ಚೌಕಟ್ಟು, ರೂಪುರೇಷೆ ರೂಪಿಸಿದ ಖ್ಯಾತಿ ರಂಗನಾಥರಿಗೆ ಸಲ್ಲುತ್ತದೆ. ಗ್ರಂಥಾಲಯ ಸೇವೆಯಲ್ಲಿರುವವರಿಗೆ ಅವರ ಸಂದೇಶಗಳು ಮಾರ್ಗದರ್ಶಕವಾಗಿ ನೆಲೆ ನಿಂತಿವೆ ಎಂದು ಹೇಳಿದರು.
ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಅಂತರ್ಜಾಲದ ಮೂಲಕ ಜ್ಞಾನ ಸಂಪಾದಿಸಿಕೊಳ್ಳುತ್ತಿದ್ದೇವೆ ಎಂದರೆ ಅದು ಗ್ರಂಥಾಲಯಗಳಿಂದಾಗಿ ಸಾಧ್ಯವಾಗಿದೆ. ಗ್ರಂಥಾಲಯ ಎಂದರೆ ಜ್ಞಾನದ ಸಾಗರ, ಜ್ಞಾನದ ಕಣಜವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಜಯ್, ಪ್ರಭಾಕರ್, ರಮೇಶ್ ಬೆಳ್ಳೂಡಿ, ಎಸ್.ಕೇಶವ, ಓದುಗರಿದ್ದರು.