ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ

Harihar, General Assembly,
Published on

ಬಾರ್‌ಗಳಲ್ಲಿ ನಿಯಮಿತ ಪರಿಶೀಲನೆಗೆ ಇಒ ತಾಕೀತು I ಹರಿಹರ ತಾಪಂ ಸಾಮಾನ್ಯ ಸಭೆ

ಹರಿಹರ: ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ದೂರುಗಳಿವೆ. ಇವಕ್ಕೆ ಕಡಿವಾಣ ಹಾಕಬೇಕೆಂದು ಇಒ ಎಸ್.ಪಿ. ಸುಮಲತಾ ಅವರು ಅಬಕಾರಿ ಉಪ ನಿರೀಕ್ಷಕ ದೇಸಿಂಗ್ ನಾಯ್ಕ ಅವರಿಗೆ ಖಡಕ್ ಸೂಚನೆ ನೀಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಮದ್ಯದಂಗಡಿ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ನಿಯಮಿತವಾಗಿ ಎಲ್ಲ ಮದ್ಯದಂಗಡಿಗಳಿಗೆ ಭೇಟಿ ನೀಡುವಂತೆ ಸೂಚಿಸಿದರು.

ತಾಲೂಕಿನ ಕೊಕ್ಕನೂರು ಪಿಎಚ್‌ಸಿ ವೈದ್ಯರು ನಿತ್ಯವೂ ಆಸ್ಪತ್ರೆಗೆ ಬರುವುದಿಲ್ಲ. ಬಂದರೂ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದಿಲ್ಲ. ಹೊರಗೆ ಖರೀದಿಸಲು ಔಷಧ ಚೀಟಿ ಬರೆದುಕೊಡುತ್ತಾರೆಂಬ ದೂರುಗಳಿವೆ ಎಂದು ಸದಸ್ಯರು ದೂರಿದರು. ಅವರಿಗೆ ತಾಕೀತು ಮಾಡುವುದಾಗಿ ವೈದ್ಯಾಧಿಕಾರಿ ಡಾ. ಪ್ರಶಾಂತ್ ಹೇಳಿದರು.

ನರೇಗಾ ಅನುದಾನದಡಿ ಹಲವು ಶಾಲೆಗಳಲ್ಲಿ ನಿರ್ಮಿಸಲಾದ ಶೌಚಗೃಹಗಳ ನಿರ್ವಹಣೆಗೆ ಶಾಲಾ ಶಿಕ್ಷಕರು ಗಮನಹರಿಸಬೇಕು ಎಂದು ಬಿಇಒ ಕಚೇರಿ ಬಿಆರ್‌ಸಿ ಕೃಷ್ಣಪ್ಪರಿಗೆ ಸೂಚನೆ ನೀಡಿದರು.

ಪರೀಕ್ಷಾ ಕೊಠಡಿಗಳ ವೆಬ್‌ಕಾಸ್ಟಿಂಗ್‌ನಿಂದಾಗಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಕುಸಿತ ಕಂಡಿದೆ ಎಂದು ಕೃಷ್ಣಪ್ಪ ಉತ್ತರಿಸಿದರು. ಸಿಸಿ ಕ್ಯಾಮರಾಗಳ ಅಳವಡಿಕೆ ಮುಂದೆಯೂ ಇರಲಿದ್ದು, ಶಿಕ್ಷಣ ಗುಣಮಟ್ಟ ಉತ್ತಮಪಡಿಸಬೇಕಿದೆ. ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಿ, ಫಲಿತಾಂಶ ಉತ್ತಮಪಡಿಸಬೇಕೆಂದು ಇಒ ತಾಕೀತು ಮಾಡಿದರು.

ಅ. 21ರಿಂದ ದನಕರುಗಳಿಗೆ ಕಾಲುಬಾಯಿ ರೋಗ ತಡೆಗೆ ಲಸಿಕೆ ಅಭಿಯಾನ ಆರಂಭಿಸಲಾಗುವುದು. ರೇಬಿಸ್ ಲಸಿಕೆಯನ್ನೂ ಉಚಿತವಾಗಿ ಹಾಕಲಾಗುತ್ತಿದೆ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ. ಕೆ.ಟಿ. ಸಿದ್ದೇಶ್ ತಿಳಿಸಿದರು.

ಮಳೆ ಅಧಿಕವಾಗಿ ಮೆಕ್ಕೆಜೋಳ ಕಟಾವಿಗೆ ಅಡ್ಡಿಯಾಗಿದೆ. ತಾಲೂಕಿಗೆ ಈ ಬಾರಿ 39 ಕೃಷಿ ಹೊಂಡ ಹಾಗೂ ತುಂತುರು ನೀರಾವರಿ ಯೋಜನೆ ನಿರ್ಮಾಣಕ್ಕೆ ಅವಕಾಶವಿದೆ. ಆಸಕ್ತ ರೈತರು ಉಪಯೋಗ ಪಡೆದುಕೊಳ್ಳಬಹುದು ಎಂದು ಕೃಷಿ ಸಹಾಯಕ ನಿರ್ದೇಶಕ ಎ.ನಾರನಗೌಡ ಹೇಳಿದರು.

ಸಭೆಗೆ ಬಾರದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಜಿಪಂ ಮುಖ್ಯ ಲೆಕ್ಕಾಧಿಕಾರಿ ಎಂ.ಎ. ವೆಂಕಟೇಶ್ ಹೇಳಿದರು. ಶಾಸಕ ಬಿ.ಪಿ.ಹರೀಶ್, ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net