

ಹರಿಹರ: ಇಲ್ಲಿನ ಬೆಸ್ಕಾಂ ಇಂಜಿನಿಯರ್ ಒಬ್ಬರನ್ನು ಲೋಕಾಯುಕ್ತ ಬಲೆಗೆ ಬೀಳಿಸಿದ್ದ ಬೆಸ್ಕಾಂ ಗುತ್ತಿಗೆದಾರ ಮಹೇಶ್ ಬೇವಿನಹಳ್ಳಿ ಅವರಿಗೆ ನಗರಸಭೆ ಮಾಜಿ ಸದಸ್ಯ ಡಿ.ಜಿ. ರಘುನಾಥ್ 25 ಸಾವಿರ ರೂ. ಪ್ರೋತ್ಸಾಹ ಧನದ ಚೆಕ್ ನೀಡಿದರು.
ನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಚೆಕ್ ವಿತರಿಸಿ ಮಾತನಾಡಿ, ನನ್ನ (ಸಿಬಿಎಸ್‌ಸಿ) ಶಾಲೆಗೆ ಎನ್‌ಒಸಿ ನೀಡಲು ಲಂಚ ಕೇಳಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಒಬ್ಬರನ್ನು ಲೋಕಾ ಟ್ರ್ಯಾಪ್ ಮಾಡಿಸಿದ್ದೆ. ಆಗಿನಿಂದಲೂ ಲೋಕಾಯುಕ್ತಕ್ಕೆ ದೂರು ನೀಡಿ, ಭ್ರಷ್ಟರನ್ನು ಬಂಧಿಸಲು ಕಾರಣವಾದ ದೂರುದಾರರಿಗೆ ಪ್ರೋತ್ಸಾಹ ಧನ ನೀಡುತ್ತಿದ್ದೇನೆ ಎಂದರು.
ರೈತರ ನೀರಾವರಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ನೀಡಲು ಹರಿಹರ ಉಪವಿಭಾಗ ಬೆಸ್ಕಾಂ ಎಇ ಲಂಚ ಕೇಳಿದ್ದರು. ಇವರು ನೀಡಿದ್ದ ದೂರನ್ನಾಧರಿಸಿ ಫೆ. 23ರಂದು ದಾಳಿ ನಡೆಸಿ ಲೋಕಾಯುಕ್ತ ಪೊಲೀಸರು ಲಂಚ ಪಡೆಯುವಾಗ ಇಂಜಿನಿಯರ್ ಬಂಧಿಸಿದ್ದರು ಎಂದರು.
ಮಹೇಶ್ ಬೇವಿನಹಳ್ಳಿ ಮಾತನಾಡಿ, ಇನ್ನು ಮುಂದೆ ಯಾರೇ ಲೋಕಾಯುಕ್ತ ದಾಳಿ ಮಾಡಿಸಿದರೂ ಡಿ.ಜಿ. ರಘುನಾಥರವರ ಮೊತ್ತಕ್ಕೆ ನಾನೂ 10 ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತೇನೆ ಎಂದು ಘೋಷಿಸಿದರು.
ಸುದ್ದಿಗೋಷ್ಟಿಯಲ್ಲಿ ರಾಜನಹಳ್ಳಿ ಎಚ್.ಎಂ. ಗುಡ್ಡದಯ್ಯ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಂಜುನಾಥ ಕೊಪ್ಪಳ, ರಾಘವೇಂದ್ರ ನಾಗೇನಹಳ್ಳಿ, ಕೃಷ್ಣಮೂರ್ತಿ ನವೀನ್‌ಕುಮಾರ್, ಭಾನುವಳ್ಳಿ ಡಿ.ಜಿ. ರುದ್ರಗೌಡ್ರು, ರಾಮಪ್ಪ, ಮಹೇಶಪ್ಪ ಇತರರಿದ್ದರು.