ಹರಿಹಳ್ಳಿ ಶ್ರೀ ಕೆಂಚಾಂಬಿಕೆ ದೇವಿ ಜಾತ್ರೆ ವೈಭವ

1002263597
ಕೆಂಚಮ್ಮನ ಹೊಸಕೋಟೆ ಹೋಬಳಿ ಹರಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಹಾಸನಾಂಬ ದೇವಿ ಸಹೋದರಿ ರಕ್ತ ಬೀಜಾಸುರನನ್ನು ಸಂಹರಿಸಿದ ಶ್ರೀ ಕೆಂಚಾಂಬಿಕೆ ದೇವಿ ಚಿಕ್ಕ ಜಾತ್ರೆಗೆ ಪ್ರಧಾನ ಅರ್ಚಕ ರಾಮಸ್ವಾಮಿ ಅವರು ಶ್ರೀ ಕೆಂಚಾಂಬಿಕೆ ದೇವಿ ಒಡವೆಗಳನ್ನು ಹೊತ್ತು ಸಾಗುತ್ತಿರುವುದು.
Published on

ಆಲೂರು: ಕೆಂಚಮ್ಮನ ಹೊಸಕೋಟೆ ಹೋಬಳಿ ಹರಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಹಾಸನಾಂಬ ದೇವಿ ಸಹೋದರಿ ರಕ್ತ ಬೀಜಾಸುರನನ್ನು ಸಂಹರಿಸಿದ ಶ್ರೀ ಕೆಂಚಾಂಬಿಕೆ ದೇವಿ ಚಿಕ್ಕ ಜಾತ್ರೆ ಸುತ್ತಮುತ್ತಲಿನ 48 ಹಳ್ಳಿಗಳ ಭಕ್ತರೊಂದಿಗೆ ವಿಜೃಂಭಣೆಯಿಂದ ಜರುಗಿತು.

ಹಾಸನಾಂಬ ದೇವಸ್ಥಾನದ ಬಾಗಿಲು ಹಾಕಿದ ಮರುದಿನ ಶ್ರೀ ಕೆಂಚಾಂಬಿಕೆ ದೇವಿ ಜಾತ್ರೆ ಉತ್ಸವಗಳು ಪ್ರಾರಂಭವಾಗುತ್ತವೆ. ದೇವಸ್ಥಾನದ ಪ್ರಧಾನ ಅರ್ಚಕ ಎಚ್.ಎನ್.ರಾಮಸ್ವಾಮಿ ಕುಟುಂಬ ಸದಸ್ಯರಾದ ಸತ್ಯನಾರಾಯಣ್ ಹಾಗೂ ವ್ಯವಸ್ಥಾಪನ ಸಮಿತಿ ಮಂಡಳಿ ಅಧ್ಯಕ್ಷ ಗೋಪಾಲ(ರಘು) ಸೇರಿದಂತೆ ಆಡಳಿತ ಮಂಡಳಿ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

ಕೆಂಚಮ್ಮನ ಹೊಸಕೋಟೆ, ಕುಂದೂರು ಹೋಬಳಿ ಹಾಗೂ ಪಾಳ್ಯ ಹೋಬಳಿಗೆ ಸೇರಿದ ಸುತ್ತಮುತ್ತಲಿನ ಸುಮಾರು 48 ಹಳ್ಳಿಗಳ ಅಧಿದೇವತೆಯಾಗಿರುವ ಕೆಂಚಾಂಬ ದೇವಿ ಉತ್ಸವದ ಮೊದಲ ದಿನವಾದ ಶನಿವಾರ ರಾತ್ರಿ ಮೂಲ ದೇವಸ್ಥಾನದಲ್ಲಿ ದೇವಿಯ ಏಳು ಮುಖಗಳುಳ್ಳ ಮೂರ್ತಿಗಳಾದ ಬ್ರಾಹ್ಮಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಣಿ, ಇಂದ್ರಾಣಿ, ಚಾಮುಂಡಿ ದೇವಿಯರಿಗೆ ಸಪ್ತಮಾತೃಕೆಯರ ಅಲಂಕಾರ ಮಾಡಿ ಮಹಾ ಮಂಗಳಾರತಿ ಬೆಳಗುವ ಮೂಲಕ ಜಾತ್ರಾ ಕೈಂಕರ್ಯಗಳನ್ನು ವಿಧ್ಯುಕ್ತವಾಗಿ ಆರಂಭಿಸಲಾಯಿತು.

ಈ ಸಮಯದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಸಮಾಗಮನವನ್ನು ನೋಡಬಹುದಾಗಿದ್ದು ನಂತರ ದೇವಾಲಯ ಆವರಣದಲ್ಲಿರುವ ಸುಗ್ಗಿ ಕಟ್ಟೆ ಮುಂದೆ ವಿಶೇಷ ಪೂಜೆ ನೆರವೇರಿಸಿದ ನಂತರ ಜನರು ಸುಗ್ಗಿ ಕಟ್ಟೆ ಮುಂದೆ ಕುಣಿದು ಸಂಭ್ರಮಿಸಿದರು.

ಉತ್ಸವಮೂರ್ತಿ ಮೆರವಣಿಗೆ

ಭಾನುವಾರ ಮೂಲ ದೇವಸ್ಥಾನದಿಂದ ಉತ್ಸವ ಮೂರ್ತಿಯೊಂದಿಗೆ, ಬೆಳ್ಳಿ, ಒಡವೆಗಳನ್ನು ವಾದ್ಯಗೋಷ್ಠಿಯೊಂದಿಗೆ ಜಾತ್ರೆ ಮೈದಾನದಲ್ಲಿರುವ ಶ್ರೀ ಕೆಂಚಾಂಬ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ತರಲಾಯಿತು.

ಮೆರವಣಿಗೆಯಲ್ಲಿ ಪ್ರತಿ ಕುಟುಂಬದವರು ಉತ್ಸವ ಮೂರ್ತಿಗೆ ಆರತಿ ಎತ್ತಿ ತೆಂಗಿನಕಾಯಿ ಒಡೆದು, ಈಡುಗಾಯಿ ಒಡೆಯಲಾಯಿತು. ಮೆರವಣಿಗೆ ದೇವಸ್ಥಾನದ ಬಳಿ ಬಂದ ನಂತರ, ಬೆಳಗ್ಗೆ 10.30ರ ಸಮಯದಲ್ಲಿ ಹುತ್ತದ ರೂಪದಲ್ಲಿರುವ ಕೆಂಚಾಂಬ ದೇವಿಗೆ ಒಡವೆಗಳನ್ನು ಧರಿಸಿ ಪೂಜಾ ವಿಧಿವಿಧಾನಗಳು ಜರುಗಿದವು. ಮಧ್ಯಾಹ್ನ 1.30ಕ್ಕೆ ಮಹಾ ಮಂಗಳಾರತಿ ನೆರವೇರಿಸಿ ಬಲಿಪ್ರದಾನ ಮಾಡಲಾಯಿತು.

ನಂತರ ಶ್ರೀ ವೀರಭದ್ರಸ್ವಾಮಿ ಉತ್ಸವ ಮೂರ್ತಿಯನ್ನು ಕೆಂಚಾಂಬ ದೇವಿಯ ಬೆಳ್ಳಿ ಪಾದದೊಂದಿಗೆ ವಾದ್ಯಗೋಷ್ಠಿ ಮೂಲಕ ಕರೆತಂದು ಮಧ್ಯಾಹ್ನ 2.30 ಗಂಟೆಗೆ ಕೆಂಡೋತ್ಸವ ನಡೆಸಲಾಯಿತು. ನಂತರ ಭಕ್ತರಿಗೆ ದೇವಿ ಪಾದ ಮುಟ್ಟಿ ನಮಸ್ಕರಿಸಲು ರಾತ್ರಿ ಹನ್ನೊಂದು ಗಂಟೆವರೆಗೂ ಅವಕಾಶ ಕಲ್ಪಿಸಲಾಗಿತ್ತು.

ನವೆಂಬರ್ 2ರವರೆಗೂ ದೇವಸ್ಥಾನದ ಬಾಗಿಲು ಬಂದ್:

ಅಕ್ಟೋಬರ್ 27ರಿಂದ ನವೆಂಬರ್ 2ರವರೆಗೂ ದೇವಸ್ಥಾನದ ಬಾಗಿಲು ತೆರೆಯುವುದಿಲ್ಲ. ನವೆಂಬರ್ 2ರಂದು ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಅಂದು ಬಾಗಿಲು ತೆರೆಯುವ ಜಾತ್ರೆ ನಡೆಸಲಾಗುತ್ತದೆ. ನಂತರ ಪುಣ್ಯಾಃ, ಸ್ವಸ್ತಿವಾಚನ ಪೂರ್ವಕವಾಗಿ ನಡೆಯಲಿವೆ.

ಕ್ಷೇತ್ರದ ಶಾಸಕ ಸಿಮೆಂಟ್ ಮಂಜು, ತಹಸೀಲ್ದಾರ್ ಮಲ್ಲಿಕಾರ್ಜುನ ಸೇರಿದಂತೆ ಆರಕ್ಷಕ ಅಧಿಕಾರಿಗಳು, ನಾಡಕಚೇರಿ ಸಿಬ್ಬಂದಿ ಸಹಿತ ದೇವಸ್ಥಾನದ ಸಮಿತಿ ಸದಸ್ಯರು ಇದ್ದರು.

ಹಾಸನಾಂಬ ದೇವಿ ಸೇರಿ ಒಟ್ಟು ಏಳು ಜನ ಸಹೋದರಿಯರಲ್ಲಿ ಹಿರಿಯಳಾದ ಕೆಂಚಾಂಬ(ಬ್ರಾಹ್ಮಿದೇವಿ) ಹರಿಹಳ್ಳಿಯಲ್ಲಿ ನೆಲೆಸಿದ್ದಾಳೆ.

ರಕ್ತ ಬೀಜಾಸುರನ ಸಂಹಾರ ಮಾಡಿದ ಸ್ಥಳ

ಮಹಿಷಾಸುರನನ್ನು ಶ್ರೀ ಚಾಮುಂಡೇಶ್ವರಿ ಸಂಹರಿಸಿದ ನಂತರ ಅವನ ಮಂತ್ರಿಯಾಗಿದ್ದ ರಕ್ತಬೀಜಾಸುರ ರಾಕ್ಷಸ ದೇವಿಯಿಂದ ತಪ್ಪಿಸಿಕೊಂಡು ಈ ಭಾಗಕ್ಕೆ ಬರುತ್ತಾನೆ. ಅವನ ಉಪಟಳ ದಿನೇ ದಿನೆ ಹೆಚ್ಚಾಗಿ ಇಲ್ಲಿನ ಪ್ರಾಣಿ, ಪಶು, ಪಕ್ಷಿಗಳಾದಿಯಾಗಿ ಮಾನವರಿಗೂ ಬದುಕುವುದೇ ಕಷ್ಟವೆಂಬ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಸಂದರ್ಭದಲ್ಲಿ ಮಾನವರ ಮೊರೆಗೆ ಓಗೊಟ್ಟು ರಕ್ತಬೀಜಾಸುರನ ಸಂಹಾರಕ್ಕೆಂದು ಹರಿಹಳ್ಳಿಯಲ್ಲಿ ಆದಿಶಕ್ತಿ ಅವತರಿಸುತ್ತಾಳೆ ಎನ್ನುತ್ತಾರೆ ಶ್ರೀ ಕೆಂಚಾಂಬಿಕೆ ದೇವಿ ದೇವಸ್ಥಾನದ ಪ್ರಧಾನ ಅರ್ಚಕ ರಾಮಸ್ವಾಮಿ.

ಇವಳು ಸರಸ್ವತಿ, ಪಾರ್ವತಿ ಹಾಗೂ ಲಕ್ಷ್ಮೀಯರ ಸಂಪೂರ್ಣ ಶಕ್ತಿ ಪಡೆದು ಇಲ್ಲಿಗೆ ಬಂದು ರಾಕ್ಷಸರೊಡನೆ ಯುದ್ಧ ಮಾಡಿ ಅನೇಕರನ್ನು ಸಂಹಾರ ಮಾಡುತ್ತಾಳೆ. ಆದರೆ ರಕ್ತ ಬೀಜಾಸುರನನ್ನು ಕೊಲ್ಲುವುದು ಸುಲಭದ ಮಾತಾಗಿರುವುದಿಲ್ಲ. ಅವನ ಒಂದು ಹನಿ ರಕ್ತ ನೆಲಕ್ಕೆ ಬಿದ್ದರೆ ಅವನಷ್ಟೇ ಶಕ್ತಿಯುಳ್ಳ ಸಹಸ್ರ ರಾಕ್ಷಸರು ಹುಟ್ಟುತ್ತಿದ್ದರು. ಹೀಗಾಗಿ ಆದಿಶಕ್ತಿ ಕೆಂಚಾಂಬಿಕೆಯು ಈತನನ್ನು ಉಪಾಯದಿಂದ ಸಂಹರಿಸುವ ಸಂಕಲ್ಪ ಮಾಡಿ ತನ್ನ ನಾಲಿಗೆಯನ್ನು ನೆಲದ ಮೇಲೆ ಹಾಸಿ ಅದರ ಮೇಲೆ ರಾಕ್ಷಸ ಬರುವಂತೆ ಮಾಡಿ ಕೊಂದಳು. ಹೀಗೆ ರಕ್ತ ಬೀಜಾಸುರನ ಸಂಹಾರ ಮಾಡಿದ ಸ್ಥಳದಲ್ಲೇ ಕೆಂಚಾಂಬಿಕೆ ನೆಲೆಸಿದ್ದಾಳೆ ಎಂದು ಇತಿಹಾಸ ಹೇಳುತ್ತದೆ. ಈ ಕಥೆಗೆ ಪೂರಕವಾಗಿ ಇಲ್ಲಿನ ಮಣ್ಣು ಕೆಂಪಾಗಿದೆ ಎಂದು ರಾಮಸ್ವಾಮಿ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net