

ವಿಜಯವಾಣಿ ಸುದ್ದಿಜಾಲ ಉಡುಪಿ
ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಶ್ರೀಮಂತಿಕೆಯನ್ನು ಬೆಳ್ಳಿತೆರೆಗೆ ತರುವ ಉದ್ದೇಶದಿಂದ ಕರಿಗರಿ ಫಿಲ್ಮ್ಸ್ ವತಿಯಿಂದ ಹರಿದಾಸರ ದಿನಚರಿ ಚಿತ್ರವನ್ನು ಅತ್ಯಂತ ಹೆಮ್ಮೆಯಿಂದ ಉಡುಪಿಯ 'ಭಾರತ್ ಸಿನಿಮಾಸ್'ನಲ್ಲಿ ಪರ್ಯಾಯ ಪುತ್ತಿಗೆ ಶ್ರೀಗಳ ಆಶೀರ್ವಾದದೊಂದಿಗೆ ಡಿ.5ರಂದು ಬಿಡುಗಡೆ ಮಾಡಲಾಗುತ್ತಿದೆ.
ಈ ಚಿತ್ರವು 15ನೇ ಶತಮಾನದ ದಾಸಶ್ರೇಷ್ಠರಾದ ಶ್ರೀ ಪುರಂದರ ದಾಸ ಅವರ ದೈನಂದಿನ ಜೀವನದ ಮನೋಹರ ದೃಶ್ಯ ಒಳಗೊಂಡಿದೆ. ಡಾ. ವಿದ್ಯಾಭೂಷಣ್ ಅವರು ಪುರಂದರರಾಗಿ ಅಭಿನಯಿಸಿದ್ದಾರೆ ಎಂದು ಚಿತ್ರದ ನಿರ್ದೇಶಕ ಗಿರೀಶ್ ನಾಗರಾಜ್ ವಿಜಯವಾಣಿಗೆ ಮಾಹಿತಿ ನೀಡಿದರು.
ಇದು ಜೀವನಚರಿತ್ರೆಯ ಚಿತ್ರವಲ್ಲ. ಪ್ರೇಕ್ಷಕರನ್ನು ಆಳವಾದ ಭಕ್ತಿ ಮತ್ತು ಕಲಾತ್ಮಕ ಅಭಿವ್ಯಕ್ತಿಯ ಯುಗಕ್ಕೆ ಕರೆದೊಯ್ಯುವ ಒಂದು ಅನುಭವ. ಅದ್ಭುತ ದೃಶ್ಯಗಳು ಮತ್ತು ಆತ್ಮಸ್ಪರ್ಶಿ ನಿರೂಪಣೆಯೇ ಚಿತ್ರದ ಜೀವಾಳ. ಪುರಂದರರು ತಮ್ಮ ದಿನಚರಿಯಲ್ಲಿ ಮುನ್ನಡೆಯುವುದು, ಅವರ ಪ್ರಸಿದ್ಧ ಜಗದೋದ್ಧಾರನ ಆಡಿಸಿದಳೆ ಯಶೋದೆ ಹಾಡು ರಚಿಸುವುದು ಮತ್ತು 15ನೇ ಶತಮಾನದ ಸಂತಸಂಯೋಜಕನ ದೈನಂದಿನ ಆಚರಣೆಗಳಲ್ಲಿ ತೊಡಗುವುದನ್ನು ಚಿತ್ರ ಅನುಸರಿಸುತ್ತದೆ.
ಪುರಂದರದಾಸರು ತಮ್ಮ ಗುರುಗಳಾದ ವ್ಯಾಸತೀರ್ಥರ ದರ್ಶನಕ್ಕೆಂದು ಅಬ್ಬೂರಿಗೆ ಭೇಟಿ ನೀಡಿದ್ದಾಗ, ದೊಡ್ಡ ಮಳೂರಿನ ಅಪ್ರಮೇಯ ಸ್ವಾಮಿ ದೇವಾಲಯದಲ್ಲಿ ನವನೀತ ಅಂಬೇಗಾಲು ಕೃಷ್ಣನ ಸುಂದರವಾದ ವಿಗ್ರಹದ ದರ್ಶನ ಪಡೆಯುತ್ತಾರೆ. ಅಲ್ಲಿಯೇ ಅವರು ಹಾಡು ರಚಿಸಿದ ಹಾಗೂ ಐತಿಹಾಸಿಕ ಘಟನೆಯ ಮೂಲ ಕಥೆ ಹೆಣೆಯಲಾಗಿದೆ. ಮುಂಜಾನೆಯ ಪ್ರಾರ್ಥನಾ ಕರ್ಮಗಳಿಂದ ಪ್ರಾರಂಭಿಸಿ, ರಾತ್ರಿ ಶಯನದ ವರೆಗಿನ ಚಿತ್ರಣ ಸಿನಿಮಾದಲ್ಲಿ ಇರಲಿದೆ. ಮಾಹಿತಿಗಾಗಿ ಮೊ.ಸಂ. 9980967783 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಭಾರತದ ಸಂಸ್ಕೃತಿಯನ್ನು ಚಲನಚಿತ್ರದ ಮೂಲಕ ಪ್ರೇಕ್ಷಕರಿಗೆ ಅನುಭವಗಳನ್ನು ಸೃಷ್ಟಿಸಿಕೊಡಲು ಕರಿಗರಿ ಫಿಲ್ಮ್ಸ್ ಬದ್ಧವಾಗಿದೆ. ಅಸಾಧಾರಣ ತಾಂತ್ರಿಕ ಗುಣಮಟ್ಟ ಮತ್ತು ಪ್ರಭಾವಶಾಲಿ ಕಥೆ ಹೇಳುವಿಕೆಯ ಮೇಲೆ ಈ ಚಿತ್ರವನ್ನು ಕೇಂದ್ರೀಕರಿಸಲಾಗಿದೆ. ಪ್ರಪಂಚದಾದ್ಯಂತದ ಪ್ರೇಕ್ಷಕರನ್ನು ಪ್ರೇರೇಪಿಸಲು ಮತ್ತು ತೊಡಗಿಸಿಕೊಳ್ಳಲು ನಾವು ಉದ್ದೇಶಿಸಿದ್ದೇವೆ. | ಗಿರೀಶ್ ನಾಗರಾಜ್. ಚಲನಚಿತ್ರ ನಿರ್ದೇಶಕ