

ಬೆಂಗಳೂರು: ಸಮಾಜಮುಖಿಯಾದ ಹರಿದಾಸರ ಕೀರ್ತನೆಗಳನ್ನು ಎಲ್ಲೆಡೆ ತಲುಪಿಸುವ ಕಾರ್ಯ ಆಗಬೇಕಿದೆ ಎಂದು ಮಾಧವ ತೀರ್ಥ ಸಂಸ್ಥಾನದ ಶ್ರೀ ವಿದ್ಯಾಸಾಗರ ಮಾಧವ ತೀರ್ಥರು ಹೇಳಿದ್ದಾರೆ.
ರಾಷ್ಟ್ರೀಯ ವೇದವಿಜ್ಞಾನ ಸಂಸ್ಥೆ ಟ್ರಸ್ಟ್, ಶ್ರೀಪಾದರಾಜ ರಿಸರ್ಚ್ ಇಂಟರ್ನ್ಯಾಷನಲ್ ಫೌಂಡೇಶನ್ ಟ್ರಸ್ಟ್ ಹಾಗೂ ಪ್ರಸನ್ನವೆಂಕಟ ಕಲ್ಚರಲ್ ಮತ್ತು ಚಾರಿಟಬಲ್ ಟ್ರಸ್ಟ್ ಭಾನುವಾರ ಆಯೋಜಿಸಿದ್ದ 4ನೇ ಅಖಿಲ ಭಾರತ ಹರಿದಾಸ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಆಶೀರ್ವಚನ ನೀಡಿದರು. ಪುರಂದರದಾಸರ 4 ಲಕ್ಷಕ್ಕೂ ಹೆಚ್ಚು ಕೀರ್ತನೆಗಳಲ್ಲಿ ಎಷ್ಟು ಪ್ರಚಲಿತವಾಗಿವೆ? ಎಷ್ಟು ಅಪ್ರಚಲಿತವಾಗಿವೆ ಎಂಬದನ್ನು ಅರಿಯಬೇಕಿದೆ. ಪ್ರಾಚೀನ ಕಾಲದ ಕೀರ್ತನೆಗಳೇ ಹೆಚ್ಚು ಅಪ್ರಚಲಿತವಾಗಿವೆ.ಇವುಗಳನ್ನು ಹೊರತರುವ ಪ್ರಯತ್ನ ಆಗಬೇಕಿದೆ ಎಂದರು.
ಹರಿದಾಸರ ಬಗ್ಗೆ ಅಧ್ಯಯನ ಮಾಡಲು ಹಿಂದಿನ ಕಾಲದಲ್ಲಿ ತುಂಬಾ ಕಷ್ಟವಾಗುತ್ತಿತ್ತು. ಇಂದು ಕಾಲ ಬದಲಾಗಿದೆ. ಆನ್ಲೈನ್ನಲ್ಲೇ ಪಾಠಪ್ರವಚನಗಳು ನಡೆಯುತ್ತಿವೆ. ಇಂದು ತಂತ್ರಜ್ಞಾನದ ನೆರವಿನಿಂದ ಅಪ್ರಚಲಿತ ಹರಿದಾಸ ಸಾಹಿತ್ಯವನ್ನು ಎಲ್ಲೆಡೆ ಪ್ರಚಲಿತಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ವೇದವಿಜ್ಞಾನ ಸಂಸ್ಥೆ ಟ್ರಸ್ಟ್ ಸಮ್ಮೇಳನದ ಮೂಲಕ ಅಪ್ರಚಲಿತ ಹರಿದಾಸಸಾಹಿತ್ಯದ ಸಾಹಿತ್ಯಾವಲೋಕನ ಆಯೋಜಿಸಿರುವುದು ಪ್ರಶಂಸನೀಯ ಎಂದು ಹೇಳಿದರು. ಸಮಗ್ರ ಹರಿದಾಸ ಸಾಹಿತ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಬೇಕಿದೆ. ಅವು ಪ್ರಕಟವಾಗದೆ ಹೊರಜಗತ್ತಿಗೆ ಹೆಚ್ಚು ಪ್ರಚಲಿತವಾಗಿಲ್ಲ ಎಂದು ಸಮ್ಮೇಳನಾಧ್ಯಕ್ಷ ಡಾ. ಅನಂತಪದ್ಮನಾಭರಾವ್ ಹೇಳಿದರು.
ಶ್ರೀ ವಿದ್ಯಾಸಾಗರ ಮಾಧವತೀರ್ಥರ ‘ಅಮೃತ ದರ್ಶನ’ ಪುಸ್ತಕ ಬಿಡುಗಡೆ ಮಾಡಲಾಯಿತು. ಮುಳಬಾಗಿಲು ಮಠದ ಶ್ರೀ ಪಾದರಾಜಮಠದ ಕೇಶವನಿಧಿತೀರ್ಥರು, ಫ್ಲೋರಿಡಾದ ಯೋಗ -ಸಂಸ್ಕೃತಮ್ ವಿಶ್ವವಿದ್ಯಾಲಯದ ಕುಲಪತಿ ಡಾ. ವಿ. ವೆಂಕಟಕೃಷ್ಣ ಶಾಸ್ತ್ರಿ, ಸಮ್ಮೇಳನದ ಪ್ರಧಾನ ಸಂಯೋಜಕ ವಿದ್ವಾನ್ ಎಚ್.ಬಿ. ಲಕ್ಷಿ್ಮೕನಾರಾಯಣ, ಡಾ. ಕೆ. ಗೋಕುಲ್ನಾಥ್, ಸಮೀರ್ ಆಚಾರ್ಯ ಮತ್ತಿತರರು ಉಪಸ್ಥಿತರರಿದ್ದರು.
ಸಮ್ಮೇಳನದ ನಿರ್ಣಯಗಳು:
ಹರಿದಾಸರು ಸಂಪ್ರದಾಯಗಳ ತಾತ್ವಿಕ ನೆಲೆಯಲ್ಲಿ ಸಾಗಿದವರು. ಹಾಗಾಗಿ ಇವರ ಸಾಹಿತ್ಯ ಹೆಚ್ಚು ಪ್ರಚಲಿತವಾಗಬೇಕಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಹರಿದಾಸ ಸಾಹಿತ್ಯ ರಚನೆಯಾಗಿದೆ. ಅವೆಲ್ಲವನ್ನೂ ಮುಖ್ಯವಾಹಿನಿಗೆ ತರುವ ಕಾರ್ಯ ಆಗಬೇಕಿದೆ. | ಡಾ. ಅನಂತಪದ್ಮನಾಭರಾವ್, 4ನೇ ಅಖಿಲ ಭಾರತ ಹರಿದಾಸ ಸಾಹಿತ್ಯ ಸಮ್ಮೇಳನಾಧ್ಯಕ್ಷ