ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ...

Vijayadaasa-1
Published on

ನ.9ರಿಂದ ಉಡುಪಿಯಲ್ಲಿ ಆಯೋಜನೆ

ಶ್ರೀ ವಿಜಯದಾಸರ ಆರಾಧನೆ, ಭಜನೆ

ವಿಜಯವಾಣಿ ಸುದ್ದಿಜಾಲ ಉಡುಪಿ 

ಇತ್ತೀಚೆಗಷ್ಟೇ ಮೂರು ದಿನಗಳ ಕಾಲ ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನವನ್ನು ಯಶಸ್ವಿಯಾಗಿ ಮುಗಿಸಿದ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣವು ಮತ್ತೊಂದು ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಅಣಿಯಾಗುತ್ತಿದೆ.

ಶ್ರೀ ವಿಜಯದಾಸರ ಆರಾಧನೆಯ ಹಿನ್ನೆಲೆಯಲ್ಲಿ ಹರಿದಾಸರ ಅಚ್ಚುಮೆಚ್ಚಿನ ನೆಲೆವೀಡಾದ ಶ್ರೀಕೃಷ್ಣನ ಸನ್ನಿಧಿಯಲ್ಲಿ ನ.9ರಿಂದ ನ.11ರ ವರೆಗೆ ಪರ್ಯಾಯ ಪುತ್ತಿಗೆ ಮಠ, ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಶ್ರೀ ಶ್ರೀನಿವಾಸ ಉತ್ಸವ ಬಳಗದ ವತಿಯಿಂದ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.

Vijayadaasa-2
ಶ್ರೀ ವಿಜಯದಾಸರು.

ಪರ್ಯಾಯ ಶ್ರೀಗಳಿಂದ ಉದ್ಘಾಟನೆ

ನ.9ರಂದು ಬೆಳಗ್ಗೆ 9:30ಕ್ಕೆ ರಾಜಾಂಗಣದಲ್ಲಿ ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಪುತ್ತಿಗೆ ಕಿರಿಯ ಪಟ್ಟದ ಸುಶ್ರೀಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಬೆಂಗಳೂರು ಬೇಲಿ ಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಶ್ರೀಗಳು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ದಾಸ ಸಾಹಿತ್ಯದ ಖ್ಯಾತ ಸಂಶೋಧಕ ಡಾ. ಎ.ಬಿ. ಶ್ಯಾಮಾಚಾರ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ.

ದಾಸವಾಣಿ ಕಾರ್ಯಕ್ರಮ

ಶಿವಮೊಗ್ಗ ನಗರ ಶಾಸಕ ಎಸ್​.ಎನ್​. ಚನ್ನಬಸಪ್ಪ, ಯುಎಸ್​ಎ ಸಂಶೋಧಕ, ವಿದ್ವಾಂಸ ಕೇಶವ ರಾವ್​ ತಾಡಪತ್ರಿ, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪಾಲ್ಗೊಳ್ಳಲಿದ್ದಾರೆ. ಸೇಡಂನ ದಾಸಧೇನು ಟ್ರಸ್ಟ್​ ಅಧ್ಯಕ್ಷ ಡಾ.ವಾಸುದೇವ ಅಗ್ನಿಹೋತ್ರಿ ಆಶಯ ಭಾಷಣ, ಹಿಂದುಸ್ತಾನಿ ಖ್ಯಾತ ಗಾಯಕ ಪಂ. ಡಾ.ಮುದ್ದು ಮೋಹನ್​ ಅವರಿಂದ ದಾಸವಾಣಿ ಕಾರ್ಯಕ್ರಮ, ನಂತರ ವಿಜಯ ದಾಸರ ಕುರಿತು ಪ್ರವಚನ ನಡೆಯಲಿದೆ ಎಂದು ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ. ಬಿ.ಗೋಪಾಲ ಆಚಾರ್ಯ ಮಾಹಿತಿ ನೀಡಿದ್ದಾರೆ.

Vijayadaasa-3
ಸಮ್ಮೇಳನದಲ್ಲಿ ಬಿಡುಗಡೆಗೊಳ್ಳಲಿರುವ ಪ್ರಬಂಧಗಳ ಸಂಕಲನದ 'ವಿಜಯ ವಿಠ್ಠಲ' ಕೃತಿ.

ಶ್ರೀನಿವಾಸ ಕಲ್ಯಾಣೋತ್ಸವ, ಶೋಭಾಯಾತ್ರೆ

ನ.10ರಂದು ಬೆಳಗ್ಗೆ 9ರಿಂದ ಕಲಿಯುಗದ ಆರಾಧ್ಯ ದೈವ ತಿರುಮಲ ಶ್ರೀನಿವಾಸನ ವೈಭವದ ಕಲ್ಯಾಣ ಮಹೋತ್ಸವ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಾಫಲ್ಯ ಮೂವೀಸ್​ ನಿಮಾರ್ಣದ ಭಕ್ತಿ ಪ್ರಧಾನ 'ಸಂಕೀರ್ತನ' ಚಲನಚಿತ್ರದ ಟೀಸರ್​ ಬಿಡುಗಡೆಗೊಳ್ಳಲಿದೆ. ನಟ ಶ್ರೀಧರ್​, ನಿಮಾರ್ಪಕ ಪದ್ಮಕಲಾ ಗುಂಡು ರಾವ್​, ನಿರ್ದೇಶಕ ಕಲಾ ಗಂಗೋತ್ರಿ ಮಂಜು, ಸಂಭಾಷಣಾಕಾರ ಜೆ.ಎಂ. ಪ್ರಹ್ಲಾದ್​, ಸಂಗೀತ ನಿರ್ದೇಶಕ ಪ್ರವೀಣ್​ ರಾವ್​ ಪಾಲ್ಗೊಳ್ಳಲಿದ್ದಾರೆ. ನ.11ರಂದು ಬೆಳಗ್ಗೆ 7ರಿಂದ ನಗರ ಸಂಕೀರ್ತನೆ ಯಾಯೀವಾರ ನಡೆಯಲಿದೆ. ಸಂಜೆ 5 ಗಂಟೆಗೆ ಪರ್ಯಾಯ ಶ್ರೀಪಾದದ್ವಯರ ಉಪಸ್ಥಿತಿಯಲ್ಲಿ ರಥಬೀದಿಯಲ್ಲಿ ಶ್ರೀ ವಿಜಯದಾಸರ ಭಾವಚಿತ್ರದ ಶೋಭಾಯಾತ್ರೆ ನಡೆಯಲಿದೆ. ಬೆಂಗಳೂರು ಗಾಯನ ಸಮಾಜದ ಅಧ್ಯಕ್ಷ, ಹಿರಿಯ ವೈದ್ಯ ಡಾ. ಎಂಆರ್​ವಿ ಪ್ರಸಾದ್​ ಅವರಿಗೆ ಮಧ್ವ ಪುರಂದರ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಶ್ರೀನಿವಾಸ ಉತ್ಸವ ಬಳಗದ ಟಿ.ವಾದಿರಾಜ ತಿಳಿಸಿದ್ದಾರೆ. ಮಾಹಿತಿಗಾಗಿ ಮೊ.ಸಂ. 9886108550, 9739369621 ಸಂಪರ್ಕಿಸಬಹುದು.

ಶ್ರೀ ವಿಜಯದಾಸರ ಆರಾಧನೆಯ ಅಂಗವಾಗಿ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ. ಶ್ರೀನಿವಾಸ ಕಲ್ಯಾಣ ಮಹೋತ್ಸವ, ಸಹಸ್ರ ಕಂಠ ಗಾಯನ, ಭಜನಾ ಮಂಡಳಿಗಳ ಸಮಾವೇಶ, ಮಧ್ವ ಪುರಂದರ ಪ್ರಶಸ್ತಿ ಪ್ರದಾನ, ಸಮ್ಮೇಳನದಲ್ಲಿ ಮಂಡಿಸುವ ಪ್ರಬಂಧಗಳ ಸಂಕಲನ 'ವಿಜಯ ವಿಠ್ಠಲ' ಕೃತಿ ಹಾಗೂ ಸರ್ವಜ್ಞ ಮಾಸ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಸೇರಿದಂತೆ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪರ್ಯಾಯ ಪುತ್ತಿಗೆ ಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net