

ಉಳ್ಳಾಲ: ಗ್ರಾಮ ಪಂಚಾಯಿತಿ ಕಟ್ಟಡ ಗ್ರಾಮದ ಆತ್ಮ. ಆರ್ಥಿಕ ಸಂಪನ್ಮೂಲ ಇಲ್ಲದಿದ್ದರೂ ಪಂಚಾಯಿತಿ ಕಟ್ಟದ ಹೇಗಿರಬೇಕು ಎನ್ನುವುದನ್ನು ಹರೇಕಳ ತೋರಿಸಿಕೊಟ್ಟಿದೆ. ಗ್ರಾಮಸ್ಥರ ಕೆಲಸ ಒಂದೇ ಕಡೆ ಮುಗಿಯಬೇಕು ಎನ್ನುವ ನೆಲೆಯಲ್ಲಿ ಎಲ್ಲ ಸೌಕರ್ಯ ಕಲ್ಪಿಸಲಾಗಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ಹರೇಕಳ ಪಂಚಾಯಿತಿಯ ನೂತನ ಕಟ್ಟಡ ‘ಗ್ರಾಮಸೌಧ’ ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಹರೇಕಳ ಗ್ರಾಮ ವಿವಿಧ ಅಭಿವೃದ್ಧಿ ಕಾಮಗಾರಿ ಮೂಲಕ ಮಾದರಿಯಾಗಿ ರೂಪುಗೊಳ್ಳುತ್ತಿದೆ. ನಿರ್ಮಾಣ ಹಂತದಲ್ಲಿರುವ ಅಡ್ಯಾರ್- ಹರೇಕಳ ಸೇತುವೆ ಮತ್ತು ಡ್ಯಾಂ ಕಾಮಗಾರಿ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಇನ್ನೂ ಅಭಿವೃದ್ಧಿ ಆಗಬೇಕೆನ್ನುವ ನೆಲೆಯಲ್ಲಿ ಪಂಚಾಯಿತಿ ಸದಸ್ಯರು ಪಕ್ಷಾತೀತವಾಗಿ ಸಹಕಾರ ನೀಡಬೇಕು ಎಂದು ಹೇಳಿದರು.
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಉದ್ಯಮಿಗಳಾದ ರಂಝೀನಾ, ನಶಲ್ ಎಂ., ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಮಲಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಗ್ರಾಮ ಸಮಿತಿ ಅಧ್ಯಕ್ಷ ಬಶೀರ್ ಉಂಬುದ, ತಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಮನಪಾ ಕಾರ್ಪೊರೇಟರ್ ಲತೀಫ್ ಕಂದುಕ, ಜಿಪಂ ಮಾಜಿ ಸದಸ್ಯ ಎನ್.ಎಸ್.ಕರೀಂ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕಲ್ಯಾಣಿ, ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್, ರಫೀಕ್, ಅಬ್ದುಲ್ ಸತ್ತಾರ್, ಎಂ.ಪಿ.ಮಜೀದ್, ಅನಿತಾ ಡಿಸೋಜ, ಹನೀಫ್, ರಹೆನಾ, ಗುಲಾಬಿ, ಅನೀಶ್, ರಹೆನಾ ಬಾನು, ಪೂವಕ್ಕು, ಪುಷ್ಪಾವತಿ, ಜಯಂತಿ, ಪ್ರಿಯಾ, ಕಾರ್ಯದರ್ಶಿ ತಾರಾಕ್ಷಿ ಮೊದಲಾದವರು ಉಪಸ್ಥಿತರಿದ್ದರು. ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಡಿಒ ಯಶವಂತ ಬೆಳ್ಚಡ ವಂದಿಸಿದರು. ಭಾಗ್ಯರಾಜ್ ಮತ್ತು ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು.
ಹರೇಕಳ ಗ್ರಾಮ ಪಂಚಾಯಿತಿಗೆ ಬರಲು ಜನ ಹೆದರುತ್ತಿದ್ದರು, ಅಲ್ಲದೆ ತಾತ್ಸಾರ ಭಾವನೆ ಹೊಂದಿದ್ದರು. ಇಂದು ನಮ್ಮ ಪಂಚಾಯಿತಿಯತ್ತಲೇ ತಿರುಗಿ ನೋಡುವಂತೆ ಮಾಡಿದ್ದೇವೆ. ಉಪ್ಪಿನಂಗಡಿ ಪಂಚಾಯಿತಿಯನ್ನು ಮಾದರಿಯನ್ನಾಗಿಸಿ ಇಟ್ಟುಕೊಂಡು ಸರ್ಕಾರ ಮತ್ತು ದಾನಿಗಳ ನೆರವಿನಿಂದ ಕುಗ್ರಾಮ ಎನಿಸಿದ್ದ ಹರೇಕಳ ಗ್ರಾಪಂ ಕಟ್ಟಡ ನಿರ್ಮಿಸಲಾಗಿದೆ.
- ಬದ್ರುದ್ದೀನ್ ಫರೀದ್ ನಗರ, ಹರೇಕಳ ಗ್ರಾಪಂ ಅಧ್ಯಕ್ಷ