ಸಂಕಷ್ಟದಲ್ಲಿ ಕೈಹಿಡಿದ ಖಾತ್ರಿ ಉದ್ಯೋಗ

8telsang1-Web
ನರೇಗಾ ಯೋಜನೆಯಡಿ ಹೂಳೆತ್ತುವ ಕೆಲಸದಲ್ಲಿ ತೊಡಗಿರುವ ಕೂಲಿಕಾರ್ಮಿಕರು.
Published on

ತೆಲಸಂಗ: ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ತೊಂದರೆ ಅನುಭವಿಸುತ್ತಿದ್ದ ಗ್ರಾಮೀಣ ಕೂಲಿಕಾರ್ಮಿಕರಿಗೆ ಅಥಣಿ ತಾಲೂಕು ಆಡಳಿತ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಮುಂದಾಗಿದೆ.

ಅಥಣಿ ತಾಲೂಕಿನಲ್ಲಿ ಒಟ್ಟು 105 ಗ್ರಾಪಂಗಳಿದ್ದು, ಅವುಗಳಲ್ಲಿ 55 ಗ್ರಾಪಂಗಳು ನರೇಗಾ ಯೋಜನೆಗೆ ಚಾಲನೆ ನೀಡಿವೆ. ತಾಲೂಕಾದ್ಯಂತ ಆಯಾ ಗ್ರಾಪಂಗಳ ಮೂಲಕ ನರೇಗಾ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿರುವುದು ಸಂಕಷ್ಟ ಸಮಯದಲ್ಲಿ ಬಡವರು ಹಾಗೂ ಕೂಲಿಕಾರ್ಮಿಕ ಕೈ ಹಿಡಿದಂತಾಗಿದೆ. ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ನೈಸರ್ಗಿಕ ಸಂಪನ್ಮೂಲ ಕಾಮಗಾರಿಗಳು, ಜಲಾಮೃತ, ವೈಯಕ್ತಿಕ, ತೋಟಗಾರಿಕೆ, ರೇಷ್ಮೆ, ಅರಣ್ಯ, ಕೃಷಿ, ವೈಯಕ್ತಿಕ ಭೂ ಅಭಿವೃದ್ಧಿ, ಬದು ನಿರ್ಮಾಣ, ಕೃಷಿ ಹೊಂಡ, ನೀರು ಕೊಯ್ಲು, ಜಲಸಂರಕ್ಷಣೆ, ಮಳೆ ನೀರು ತಡೆಗಟ್ಟುವಿಕೆ ಸೇರಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕರೊನಾ ಸೋಂಕು ನಿಯಂತ್ರಿಸಲು ಕೂಲಿಕಾರ್ಮಿಕರಿಗೆ ಮಾಸ್ಕ್ ಬಳಕೆ, ಸ್ಯಾನಿಟೈಸರ್ ಹಾಗೂ ಸೋಪ್ ಬಳಕೆಗೆ ಅಥಣಿ ತಾಲೂಕಿನ ಗ್ರಾಪಂಗಳು ವ್ಯವಸ್ಥೆ ಮಾಡಿವೆ.

ಕೆಲಸಕ್ಕೆ ಬರಲು ಮನವಿ: ತಾಲೂಕು ಆಡಳಿತದಿಂದ ಕೂಲಿ ಕೆಲಸಕ್ಕೆ ಬರುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ, ಲಾಕ್‌ಡೌನ್‌ನಿಂದ ಕೂಲಿಕಾರ್ಮಿಕರಿಗೆ ಮಾನಸಿಕವಾಗಿ ಯಾವುದೇ ಪರಿಣಾಮ ಬೀರದಂತೆ ಉದ್ಯೋಗ ಭದ್ರತೆಯ ಜತೆಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಕೂಲಿಗಾಗಿ ಗುಳೆ ಹೋಗುತ್ತಿದ್ದ ಗ್ರಾಮೀಣ ಜನರಿಗೆ ಸದ್ಯ ನರೇಗಾ ಕೆಲಸ ದೊರೆತಿದೆ. ಮಹಿಳೆ ಮತ್ತು ಪುರುಷರಿಗೆ ಸಮಾನ ವೇತನ ನೀಡಲಾಗುತ್ತಿದೆ. ಈ ಹಿಂದೆ ಒಬ್ಬರಿಗೆ 249 ರೂಪಾಯಿ ನೀಡುತ್ತಿದ್ದರು. ಆದರೆ, ಲಾಕ್‌ಡೌನ್‌ನಿಂದ ಸದ್ಯ ದಿನಕ್ಕೆ 275 ರೂಪಾಯಿ ಕೂಲಿಯನ್ನು ಸರ್ಕಾರ ಘೋಷಣೆ ಮಾಡಿದೆ.

ಒಬ್ಬರಿಗೆ 100 ದಿನ ಕೆಲಸ ಕೊಡಲಾಗುತ್ತಿದೆ. ಬರಪೀಡಿತ ತಾಲೂಕುಗಳು ಇದ್ದರೆ ಅಲ್ಲಿ 150 ದಿನ ಕೂಲಿ ದೊರೆಯಲಿದೆ. ಅಥಣಿ ತಾಲೂಕಿನಲ್ಲಿ ಸುಮಾರು 4,187 ಕಾರ್ಮಿಕರು ನರೇಗಾ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಒಟ್ಟಿನಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಅಂತಂತ್ರರಾಗಿದ್ದ ಅಸಂಘಟಿತ ಕೂಲಿಕಾರ್ಮಿಕರಿಗೆ ನರೇಗಾ ಯೋಜನೆ ವರದಾನವಾಗಿದೆ. ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಮನೆಯಲ್ಲೇ ಕುಳಿತುಕೊಂಡಿದ್ದೆವು. ಸದ್ಯ ನರೇಗಾ ಯೋಜನೆಯಡಿ ದುಡಿಮೆ ಸಿಕ್ಕಿದ್ದು, ಇದರಿಂದಲೇ ಜೀವನ ನಿರ್ಹಣೆ ಮಾಡುತ್ತಿದ್ದೇವೆ ಎನ್ನುತ್ತಾರೆ ತೆಲಸಂಗ ಗ್ರಾಮದ ಕಾರ್ಮಿಕ ಅಪ್ಪು ಬಾಳು ಕುಂಬಾರಕರ.

ಸರ್ಕಾರದ ನಿರ್ದೇಶನದಂತೆ ಕೂಲಿ ಕೇಳಿಕೊಂಡು ಬಂದ ಕಾರ್ಮಿಕರಿಗೆ ಆಯಾ ಗ್ರಾಪಂಗಳ ಮೂಲಕ ಕೆಲಸ ಕೊಡುತ್ತಿದ್ದೇವೆ. ಯಾವುದೇ ಗ್ರಾಪಂನವರು ಕೆಲಸ ಇಲ್ಲವೆಂದರೆ ನೇರವಾಗಿ ನಮ್ಮನ್ನು ಸಂಪರ್ಕಿಸಬೇಕು.
| ರವಿ ಬಂಗಾರೆಪ್ಪನವರ ಅಥಣಿ ತಾಪಂ ಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net