

ಕಾರವಾರ: ಕೋವಿಡ್ ನೆಗೆಟಿವ್ ವರದಿ ಇಲ್ಲದೆ ಬಸ್ನಲ್ಲಿ ಕಾರವಾರಕ್ಕೆ ನಿಶ್ಚಿತಾರ್ಥಕ್ಕೆ ಬಂದ ಗೋವಾದ ಜನ ಸಂಕಷ್ಟಕ್ಕೆ ಸಿಲುಕಿದ ಘಟನೆ ಗುರುವಾರ ನಡೆದಿದೆ.
ಕೋವಿಡ್ ಪ್ರಸರಣ ಹೆಚ್ಚಿರುವ ಕಾರಣ ಗೋವಾ-ಕರ್ನಾಟಕ ಮಧ್ಯೆ ಮುಕ್ತ ಸಂಚಾರಕ್ಕೆ ಅವಕಾಶವಿಲ್ಲ. 72 ಗಂಟೆಗಳ ಮುಂಚಿನ ಆರ್ಟಿಪಿಸಿಆರ್ ಕೋವಿಡ್ ನೆಗೆಟಿವ್ ವರದಿ, ಇಲ್ಲವೆ, 24 ಗಂಟೆಗಳ ಮುಂಚಿನ ರ್ಯಾಪಿಡ್ ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಇದ್ದರೆ ಕರ್ನಾಟಕದಿಂದ ಗೋವಾ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಇಲ್ಲವೆ, ಗೋವಾ ಸರ್ಕಾರ ರಾಷ್ಟ್ರೀಯ ಹೆದ್ದಾರಿ
66ರ ಪೋಳೆಂ ಗಡಿಯಲ್ಲಿ ತೆರೆದ ತುರ್ತು ಪ್ರಯೋಗಾಲಯದಲ್ಲಿ 270 ರೂ. ನೀಡಿ ರ್ಯಾಪಿಡ್ ಪರೀಕ್ಷೆ ಮಾಡಿಸಿಕೊಂಡು ಗೋವಾ ರಾಜ್ಯ ಪ್ರವೇಶಿಸಬಹುದಾಗಿದೆ.
ಇನ್ನು ಗೋವಾದಿಂದ ಕರ್ನಾಟಕ ರಾಜ್ಯ ಪ್ರವೇಶಿಸುವಾಗ ಕೂಡ ನಮ್ಮ ರಾಜ್ಯದ ಆಡಳಿತದಿಂದ ಆರ್ಟಿಪಿಸಿಆರ್ ಅಥವಾ ರ್ಯಾಪಿಡ್ ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಕೇಳಲಾಗುತ್ತದೆ. ಇಲ್ಲದಿದ್ದಲ್ಲಿ ಕೈಗೆ 14 ದಿನದ ಕ್ವಾರಂಟೈನ್ ಸೀಲ್ ಹಾಕಿ ಕಳಿಸಲಾಗುತ್ತದೆ. ಈ ನಿಯಮ ಸಂಬಂಧ ಕಾರವಾರ-ಗೋವಾ ಗಡಿಯಲ್ಲಿ ಆಗಾಗ ವಾದ, ವಿವಾದಗಳು ನಡೆಯುತ್ತಿರುತ್ತವೆ. ಗುರುವಾರ ಇದೇ ನಿಯಮ ನಿಶ್ಚಿತಾರ್ಥಕ್ಕೂ ಅಡ್ಡಿಯಾಗಿದೆ.
ಗೋವಾ ರಾಜ್ಯದ ಯುವಕ ಹಾಗೂ ಕಾರವಾರದ ಯುವತಿಯ ನಡುವೆ ಮದುವೆ ನಿಶ್ಚಿತಾರ್ಥ ಗುರುವಾರ ತಾಲೂಕಿನಲ್ಲಿ ನಿಗದಿಯಾಗಿತ್ತು. ಅದಕ್ಕಾಗಿ ಒಂದು ಬಸ್ನಲ್ಲಿ 20ಕ್ಕೂ ಹೆಚ್ಚು ಜನ ಗೋವಾದಿಂದ ಕಾರವಾರದೆಡೆಗೆ ಮಧ್ಯಾಹ್ನ 11 ಗಂಟೆಯ ಹೊತ್ತಿಗೆ ಆಗಮಿಸಿದ್ದರು. ಆದರೆ, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಾಜಾಳಿಯ ತನಿಖಾ ಠಾಣೆಯಲ್ಲಿ ರಾಜ್ಯ ಪ್ರವೇಶಕ್ಕೆ ಅವಕಾಶ ಸಿಗಲಿಲ್ಲ. ಬಂದವರು ಪರಿಪರಿಯಾಗಿ ಬೇಡಿ ತಮ್ಮ ಸಮಸ್ಯೆ ಹೇಳಿಕೊಂಡ ನಂತರ ಮಾಜಾಳಿಯ ಕೋವಿಡ್ ತನಿಖಾ ಠಾಣೆಯ ಅಧಿಕಾರಿಗಳು ಮಾನವೀಯತೆ ದೃಷ್ಟಿಯಿಂದ 8 ಜನರಿಗೆ ಮಾತ್ರ ರ್ಯಾಪಿಡ್ ಕೋವಿಡ್ ಪರೀಕ್ಷೆ ಮಾಡಿಸಿ ಕಾರವಾರದಲ್ಲಿ ನಡೆಯುವ ನಿಶ್ಚಿತಾರ್ಥದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟರು. ಉಳಿದ 12ಕ್ಕೂ ಅಧಿಕ ಜನ ಸುಮಾರು 2 ತಾಸು ಮಾಜಾಳಿಯ ಗಡಿಯಲ್ಲೇ ಕಾದು ವಾಪಸಾದರು.