ಅಭಿವೃದ್ಧಿ ಹೆಸರಲ್ಲಿ ಜನರಿಗೆ ಸಂಕಷ್ಟ

17ark20
Published on

ಅರಕಲಗೂಡು: ದಶಕಗಳಿಂದ ಕಗ್ಗಂಟಾಗಿ ಪರಿಣಮಿಸಿದ್ದ ಪಟ್ಟಣದ ಸಾಲಗೇರಿ ರಸ್ತೆ ವಿಸ್ತರಣೆಗೆ ಪಟ್ಟಣ ಪಂಚಾಯಿತಿ ಇದೀಗ ಮನೆಗಳ ತೆರವು ಕಾರ್ಯಾಚರಣೆಗೆ ಮುಂದಾಗಿದ್ದು, ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದಿರುವುದರಿಂದ ಬದುಕು ಬೀದಿಗೆ ಬಿದ್ದಂತಾಗಿದೆ. ಅಲ್ಲದೆ ಶತಮಾನಗಳಿಂದ ವಾಸವಿದ್ದ ಮನೆಯಿಂದ ಹೊರ ಬಿದ್ದು ನೆಲೆ ಕಾಣದಾಗುತ್ತೆಂಬ ದುಡುಗ ಅನೇಕ ನಿವಾಸಿಗಳಲ್ಲಿ ಮಡುಗಟ್ಟಿದೆ.

ಪಟ್ಟಣದಿಂದ ಹೊಳಲಗೋಡು, ಕೊಣನೂರು ಮಾರ್ಗವಾಗಿ ಹಾದು ಹೋಗಿರುವ ಪ್ರಮುಖ ಮಾರ್ಗ ಇದಾಗಿದ್ದು, ಕೋಟೆ ದೊಡ್ಡಮ್ಮ ದೇವಸ್ಥಾನದಿಂದ ಸಾಲಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಿರಿದಾಗಿದ್ದ ಹಿನ್ನೆಲೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಎರಡು ವಾಹನಗಳು ಎದುರು ಬದುರಾದರೆ ಅಪಾಯ ಧುತ್ತನೆ ಎದುರಾಗುತ್ತಿತ್ತು. ಅದೆಷ್ಟೋ ಬಾರಿ ವಾಹನಗಳು ಚರಂಡಿಗೆ ಬಿದ್ದು, ವಿದ್ಯುತ್ ಕಂಬ ಮುರಿದು ಅನಾಹುತ ಸಂಭವಿಸಿದೆ. ಹೀಗಾಗಿ ರಸ್ತೆ ವಿಸ್ತರಣೆ ಆಗಲೇಬೇಕು ಎಂಬುದು ವಾಹನ ಸವಾರರ ಒತ್ತಾಯವಾಗಿತ್ತು. ಇದಕ್ಕೆ ಪಪಂ ಕೂಡ ಹಲವು ಸಲ ಮುಂದಾಗಿತ್ತು. ಆದರೆ ಪರ್ಯಾಯ ವ್ಯವಸ್ಥೆ ಇಲ್ಲದೆ ಮನೆಗಳ ತೆರವಿಗೆ ಅವಕಾಶ ನೀಡುವುದಿಲ್ಲ ಎಂದು ನಿವಾಸಿಗಳು ಪಟ್ಟು ಹಿಡಿದಿದ್ದರಿಂದ ಅಧಿಕಾರಿಗಳು ಬರಿಗೈಲಿ ಮರಳುವಂತಾಗಿತ್ತು.

ಪಪಂ ಆಡಳಿತಾಧಿಕಾರಿಯಾಗಿರುವ ತಹಸೀಲ್ದಾರ್ ರೇಣುಕುಮಾರ್ ಕಳೆದ ತಿಂಗಳು ಪೊಲೀಸರ ಸಮ್ಮುಖದಲ್ಲಿ ರಸ್ತೆ ವಿಸ್ತರಣೆ ಸಂಬಂಧ ಸಭೆ ನಡೆಸಿ ನಿವಾಸಿಗಳ ಮನವೊಲಿಸಿದ್ದರು. ಹೀಗಾಗಿ ಕಗ್ಗಂಟಾಗಿದ್ದ ರಸ್ತೆ ವಿಸ್ತರಣೆಗೆ ಮುಹೂರ್ತ ಕೂಡಿ ಬಂದಿದೆ. ಸಾಲಗೇರಿ ಬಡಾವಣೆಯಲ್ಲಿ ತಾಲೂಕಿನ ಮೊದಲ ಶಾಸಕರಾಗಿ ಆಯ್ಕೆಯಾಗಿದ್ದ ದಿ.ಪುಟ್ಟೇಗೌಡ ಅವರ ಮನೆ ಇದೆ.

ಒಂದೆಡೆ ಕಿಷ್ಕಿಂಧೆಯಂತಿರುವ ರಸ್ತೆ ವಿಸ್ತರಣೆಯಾಗಿ ವಾಹನ ಸವಾರರು ಅನುಭವಿಸುತ್ತಿರುವ ಸಂಚಾರ ದಟ್ಟಣೆಗೆ ಮುಕ್ತಿ ಸಿಗಬೇಕು ಎಂಬುದು ಸಾರ್ವಜನಿಕರ ಒತ್ತಾಸೆ. ಇನ್ನೊಂದೆಡೆ ಅಭಿವೃದ್ಧಿ ಹೆಸರಿನಲ್ಲಿ ಪರಿಹಾರ ನೀಡದೆ ಏಕಾಏಕಿ ಮನೆಗಳ ತೆರವಿಗೆ ಮುಂದಾದ ಕ್ರಮದ ವಿರುದ್ಧ ನಿವಾಸಿಗಳು ‘ಲೌಡ್ ಸ್ಪೀಕರ್’ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸಂತ್ರಸ್ತರಿಗೆ ಅನ್ಯಾಯ
ಸಾಲಗೇರಿ ರಸ್ತೆ ವಿಸ್ತರಣೆಗೆ ನಮ್ಮ ಅಡ್ಡಿಯಿಲ್ಲ. 30 ವರ್ಷಗಳ ಹಿಂದೆ ಖರೀದಿಸಿದ ಜಾಗದಲ್ಲಿ ಮನೆ ಕಳೆದುಕೊಳ್ಳುವವರಿಗೆ ನಿವೇಶನ ಹಂಚುವುದಾಗಿ ಆಳುವವರು ನಾಟಕ ಮಾಡುವುದರಲ್ಲೆ ಕಾಲ ಕಳೆದರು. ಪಪಂ ಖರೀದಿಸಿದ ಈ ಜಾಗದಲ್ಲಿ ಬೇರೆಯವರು ಮನೆ ನಿರ್ಮಿಸಿಕೊಳ್ಳುತ್ತಿದ್ದು ಇದೀಗ ರಸ್ತೆ ವಿಸ್ತರಣೆಗಾಗಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಅನ್ಯಾಯ ಮಾಡಲಾಗುತ್ತಿದೆ.
ಮಂಜುನಾಥ್ ಸಾಲಗೇರಿ ನಿವಾಸಿ, ಸೆಸ್ಕ್ ನಿವೃತ್ತ ಇಂಜಿನಿಯರ್

ಪರಿಹಾರ ನೀಡದ ಅಧಿಕಾರಿಗಳು
ರಸ್ತೆ ವಿಸ್ತರಣೆಗಾಗಿ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದೇವೆ. ನಮ್ಮ ಕುಟುಂಬಕ್ಕೆ ಆಸರೆಯಾಗಿ ಯಾರೂ ಇಲ್ಲ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಅಧಿಕಾರಿಗಳು ಪರಿಹಾರ ನೀಡದೆ ಮನೆ ಒಡೆದು ಕಷ್ಟ ಕೊಟ್ಟಿದ್ದಾರೆ.
ರಂಗೇಗೌಡ ವೃದ್ಧ, ಸ್ಥಳೀಯ ನಿವಾಸಿ

ನಿಲ್ಲಲು ನೆಲೆ ಇಲ್ಲ
ರಸ್ತೆ ವಿಸ್ತರಣೆ ಮಾಡುವುದು ಒಳ್ಳೆಯದು. ಮನೆ ಖಾಲಿ ಮಾಡಿದರೆ ಇಲ್ಲಿ ಬಾಡಿಗೆ ಮನೆಗಳು ಸಿಗುತ್ತಿಲ್ಲ. ಜತೆಗೆ ಪರಿಹಾರವೂ ಇಲ್ಲ, ನಿಲ್ಲಲು ನೆಲೆಯೂ ಇಲ್ಲದ ಪರಿಸ್ಥಿತಿ ಎದುರಿಸುತ್ತಿದ್ದೇವೆ.
ತಿಮ್ಮೇಗೌಡ, ನಿವಾಸಿ

ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸುವರಿಲ್ಲ
ಜನಪ್ರತಿನಿಧಿಗಳು ಎಲ್ಲೋ ಕುಳಿತು ಅಧಿಕಾರಿಗಳನ್ನು ಕರೆಸಿ ತೀರ್ಮಾನ ತೆಗೆದುಕೊಂಡು ನಮ್ಮನ್ನು ಕೇಳದೆ ಏಕಾಏಕಿ ಜೆಸಿಬಿ ತಂದು ಮನೆ ಕೆಡವಿದರು. ಅಧಿಕಾರಸ್ಥರನ್ನು ಹೇಳುವವರು, ಕೇಳುವವರು ಇಲ್ಲವಾಗಿದ್ದಾರೆ. ನಾವಿಂದು ಅತಂತ್ರ ಸ್ಥಿತಿ ತಲುಪಿದ್ದೇವೆ.
ರಾಜು, ಕೆಳ ಸಾಲಗೇರಿ ನಿವಾಸಿ

ಜೀವನ ನಿರ್ವಹಣೆ ಕಷ್ಟಕರ
ಮನೆ ಕಳೆದುಕೊಂಡಿರುವುದರಿಂದ ಆಕಾಶವೇ ತಲೆಮೇಲೆ ಬಿದ್ದಂತಾಗಿದೆ. ಬಾಡಿಗೆ ಮನೆ ಮಾಡಿ ವಾಸಿಸಲು ಹಣವಿಲ್ಲ. ಜೀವನ ನಿರ್ವಹಣೆ ಕಷ್ಟಕರವಾಗಿದೆ. ಮನೆ ಸಾಮಗ್ರಿ ಇಟ್ಟುಕೊಳ್ಳಲು ಜಾಗವಿಲ್ಲದೆ ಪರದಾಡುತ್ತಿದ್ದೇವೆ. ಹತ್ತಿರದ ಸಂಬಂಧಿಕರ ಮನೆಗೆ ಆಶ್ರಯ ಬಯಸಿ ಹೋಗಬೇಕಾಗಿದೆ.
ಕಮಲಾ, ಸಾಲಗೇರಿ ನಿವಾಸಿ.

ಹುಸಿಯಾದ ನಿರೀಕ್ಷೆ
ಮನೆ ಕಳೆದುಕೊಳ್ಳುವ ಮುನ್ನ ಪರಿಹಾರ ಸಿಗುವ ನಿರೀಕ್ಷೆಯಲ್ಲಿದ್ದೆವು. ಆದರೆ ಏಕಾಏಕಿ ಮನೆ ಕೆಡವಿ ಪರಿಹಾರ ನೀಡದೆ ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ.
ಗಂಗಾಧರ್, ನಿವಾಸಿ

ಅಧಿಕಾರಿಗಳಿಗೆ ನಾವು ಆಟದ ಬೊಂಬೆ
ಕೂಲಿ ಕಾರ್ಮಿಕರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಮ್ಮನ್ನು ಆಟದ ಬೊಂಬೆ ಮಾಡಿಕೊಂಡಿದ್ದಾರೆ. ಸರ್ಕಾರಿ ಜಾಗವೆಂದು ಸ್ವಲ್ಪಭಾಗವನ್ನು ತೆರವುಗೊಳಿಸಿದ್ದಾರೆ. ಪರಿಹಾರ ನೀಡದೆ ಇನ್ನುಳಿದ ಜಾಗ ತೆರವುಗೊಳಿಸಲು ಬಂದರೆ ಬರವಣಿಗೆ ನೀಡಿ ತೆರವುಗೊಳಿಸಬೇಕೆಂದು ಒತ್ತಾಯ ಪಡಿಸುವೆ.
ವೆಂಕಟೇಶ್, ನಿವಾಸಿ.

ಪೂರ್ವಜರ ಕಾಲದಿಂದಲೂ ವಾಸ
ನಮ್ಮ ಪೂರ್ವಜರ ಕಾಲದಿಂದಲೂ ಇಲ್ಲಿ ವಾಸವಿದ್ದೇವೆ. ಮನೆ ಕಂದಾಯ ಪಾವತಿಸುತ್ತಿದ್ದೇವೆ. ಈ ಬಗ್ಗೆ ನಮ್ಮ ಬಳಿ ದಾಖಲೆಗಳಿವೆ. ಇದು ಸರ್ಕಾರಿ ಜಾಗವೆಂದು ಅಧಿಕಾರಿಗಳು ತೆರವಿಗೆ ಮುಂದಾಗಿದ್ದಾರೆ. ದಾಖಲೆ ಇಲ್ಲವೆಂದಾದರೆ ಇಷ್ಟು ವರ್ಷ ನಮ್ಮನ್ನು ಇಲ್ಲಿ ವಾಸಿಸಲು ಏಕೆ ಅವಕಾಶ ನೀಡಬೇಕಿತ್ತು.
ನಾಗೇಶ್, ನಿವಾಸಿ.

ತಲೆಕೆಡಿಸಿಕೊಳ್ಳದ ಜನಪ್ರತಿನಿಧಿಗಳು
ಮನೆ ತೆರವುಗೊಳಿಸುವುದಾಗಿ ಅಧಿಕಾರಿಗಳು ಏಕಾಏಕಿ ಮನೆಗೆ ನುಗ್ಗಿ ಭಯ ಹುಟ್ಟಿಸಿದರು. ಚುನಾವಣೆ ಸಮಯದಲ್ಲಿ ಓಟು ಕೇಳಲು ಬರುವ ಜನಪ್ರತಿನಿಧಿಗಳು ಈಗ ಇತ್ತ ತಲೆಹಾಕುತ್ತಿಲ್ಲ. ಮನೆ ಕಳೆದುಕೊಂಡರೂ ಪರಿಹಾರ ನೀಡಿಲ್ಲ.
ಪುಟ್ಟಮ್ಮ, ನಿವಾಸಿ.

ಸಮಸ್ಯೆಗೆ ಸ್ಪಂದಿಸದ ಶಾಸಕರು
ನಾವೇನು ಜನಪ್ರತಿನಿಧಿಗಳಿಗೆ ಮತ ಕೊಡುವುದಿಲ್ಲವೇ. ಶಾಸಕರು ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ನಾನು ಅಂಗವಿಕಲನಾಗಿದ್ದು ನನ್ನ ಬಳಿ ಹಣವಿಲ್ಲ. ಪರಿಹಾರವಿಲ್ಲದೆ ಈಗ ನಾವೆಲ್ಲಿಗೆ ಹೋಗಬೇಕು ಎಂಬುದನ್ನು ಅವರೇ ಬಂದು ಹೇಳಲಿ.
ಸೈಯದ್ ಏಜಾಜ್ (ಚಂದನ್). ನಿವಾಸಿ

ನ್ಯಾಯಾಲಯದ ಮೆಟ್ಟಿಲೇರಲು ನಿರ್ಧಾರ
ಕಾನೂನುಬದ್ಧವಾಗಿ ತೆರವು ಕಾರ್ಯಾಚರಣೆ ಮಾಡಿದರೆ ನಮ್ಮ ತಕರಾರಿಲ್ಲ. ಒತ್ತುವರಿಯಾಗಿರುವ 52 ಮನೆಗಳನ್ನು ತೆರವುಗೊಳಿಸುವುದಾಗಿ ಹೇಳಿ, ಈಗ ಎಲ್ಲ ಮನೆಗಳನ್ನು ಒಡೆಯಲು ಮುಂದಾಗಿರುವುದು ಸರಿಯಲ್ಲ. ರಸ್ತೆ ವಿಸ್ತರಣೆಯಾಗಲಿ. ಅಲ್ಲದೆ ಅಭಿವೃದ್ಧಿ ಹೆಸರಿನಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡಬೇಕು. ಕಾನೂನುಬಾಹಿರವಾಗಿ ನಮ್ಮ ಮನೆ ಒಡೆಯಲು ಬಂದರೆ ನ್ಯಾಯಾಲಯದ ಮೊರೆ ಹೋಗಲಾಗುವುದು.
ಗುರು, ನಿವಾಸಿ.

ಸಾಲಗೇರಿ ಮಾರ್ಗದ ರಸ್ತೆ 100 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ಅಭಿವೃದ್ದಿ ಆಗಬೇಕು. ಇಲ್ಲಿ ಬಡವರು, ಕೂಲಿ ಕಾರ್ಮಿಕರು ವಾಸವಿದ್ದಾರೆ. ಸಮಾನಾಂತರವಾಗಿ ಮನೆ ತೆರವುಗೊಳಿಸಬೇಕು. ಸೂಕ್ತ ಪರಿಹಾರವನ್ನೂ ಒದಗಿಸಬೇಕು.
ರವಿಕುಮಾರ್, ಪಪಂ ಮಾಜಿ ಸದಸ್ಯ.

ಕಷ್ಟಕ್ಕೆ ನೆರವಾಗಬೇಕು
ನಮ್ಮದು ಬಡ ಕುಟುಂಬವಾಗಿರುವುದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ರಸ್ತೆ ವಿಸ್ತರಣೆಗಾಗಿ ಜೆಸಿಬಿಯಿಂದ ಮನೆ ಕೆಡವಲಾಗಿದೆ. ನಾನು ಅಂಗವಿಕಲೆಯಾಗಿದ್ದು, ದುಡಿಯಲು ಸಹ ಆಗುತ್ತಿಲ್ಲ, ಅಧಿಕಾರಿಗಳು ಪರಿಹಾರ ನೀಡಿ ನಮ್ಮ ಕಷ್ಟಕ್ಕೆ ನೆರವಾಗಬೇಕು.
ಗಿರಿಜಮ್ಮ, ವೃದ್ಧೆ

ಸಾಲಗೇರಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಹಾಗಾಗಿ ರಸ್ತೆ ವಿಸ್ತರಣೆಗಾಗಿ ಮನೆಗಳನ್ನು ತೆರವುಗೊಳಿಸಲಾಗುತ್ತಿದೆ. ಕೆಲ ನಿವಾಸಿಗಳು ಸ್ವಯಂ ಪ್ರೇರಿತರಾಗಿ ಮನೆ ತೆರವಿಗೆ ಸಹಕರಿಸುತ್ತಿದ್ದಾರೆ. ಮನೆ ಕಳೆದುಕೊಳ್ಳುವ ಬಡವರು, ನಿರ್ಗತಿಕರಿಗೆ ಆಶ್ರಯ ಯೋಜನೆಯಡಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಸಂಬಂಧ ಆಡಳಿತಾಧಿಕಾರಿಗಳು ಕ್ರಮ ಕೈಗೊಳ್ಳುವರು.
ಸುರೇಶ್‌ಬಾಬು, ಪಪಂ ಮುಖ್ಯಾಧಿಕಾರಿ.

ಸಾಲಗೇರಿ ಮಾರ್ಗದ 900 ಮೀ. ಉದ್ದದ ರಸ್ತೆ ವಿಸ್ತರಣೆಗಾಗಿ 3 ಕೋಟಿ ರೂ. ಅನುದಾನ ಮಂಜೂರಾಗಿದೆ. ರಸ್ತೆಯ ಎರಡೂ ಬದಿ ಕಾಂಕ್ರೀಟ್ ಚರಂಡಿ ಮತ್ತು ಪಾದಚಾರಿ ಮಾರ್ಗ ನಿರ್ಮಿಸಲಾಗುವುದು. ರಸ್ತೆಯ ಅಗಲ 10 ಮೀ, 1.80 ಮೀ ಇದ್ದು, ಎರಡೂ ಬದಿ 45 ಅಡಿ ರಸ್ತೆ ವಿಸ್ತರಣೆಯಾಗಲಿದೆ.
ರಾಜಶೇಖರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಅರಕಲಗೂಡು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net