

ಆನೇಕಲ್: ರಾಜ್ಯ ಸರ್ಕಾರ ಈ ಬಾರಿ ದೀಪಾವಳಿಯಲ್ಲಿ ಹಸಿರು ಪಟಾಕಿ ಸುಡಲು ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಅತ್ತಿಬೆಲೆ, ಚಂದಾಪುರ ಹಾಗೂ ನೆರಳೂರು ಭಾಗದ ಪಟಾಕಿ ವ್ಯಾಪಾರಸ್ಥರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಂದಾಜು 250ರಿಂದ 300 ಪಟಾಕಿ ಮಳಿಗೆಗಳು ಶನಿವಾರ ಬೆಳಗ್ಗೆಯಿಂದಲೂ ಅಂಗಡಿ ಹಾಗೂ ಗೋದಾಮುಗಳಲ್ಲಿ ಶೇಖರಿಸಿದ್ದ ಪಟಾಕಿಗಳನ್ನು ಟ್ರಕ್‌ಗಳ ಮೂಲಕ ತಮಿಳುನಾಡಿಗೆ ಮರುಮಾರಾಟ ಮಾಡುತ್ತಿದ್ದ ದೃಶ್ಯ ಕಂಡುಬಂತು. ಜತೆಗೆ ಹಸಿರು ಪಟಾಕಿ ತರಿಸಿಕೊಳ್ಳಲು ಮುಂದಾಗಿದ್ದಾರೆ.
ನೆರಳೂರಿನಲ್ಲಿ ಮಾದರಿ ಪಟಾಕಿ ಅಂಗಡಿ: ಸರ್ಕಾರ ಭಾರಿ ಶಬ್ದ ಮಾಡುವ ಹಾಗೂ ಮಾಲಿನ್ಯ ಮಾಡುವ ಪಟಾಕಿಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ರಾಮಸ್ವಾಮಿ ಎಂಬುವವರು ಚಂದಾಪುರ ಸಮೀಪದ ನೆರಳೂರಿನಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಇತರರಿಗೂ ಮಾದರಿಯಾಗಿದ್ದಾರೆ.
ಸರ್ಕಾರ ನಿರ್ಧಾರ ಮರುಪರಿಶೀಲಿಸಲಿ: ರಾಜ್ಯ ಸರ್ಕಾರ ನಿರ್ಧಾರ ಮರುಪರಿಶೀಲಿಸಬೇಕು. ಈಗಾಗಲೇ ಕೋಟಿಗಟ್ಟಲೆ ಬಂಡವಾಳ ಹಾಕಿರುವ ಮಾಲೀಕರ ಬದುಕು ಬೀದಿಗೆ ಬರುವ ಅಪಾಯವಿದೆ. ಆದ್ದರಿಂದ, ಸರ್ಕಾರ ನಿರ್ಧಾರ ಮರುಪರಿಶೀಲಿಸಬೇಕು ಎಂದು ಪಟಾಕಿ ಅಂಗಡಿ ಮಾಲೀಕರು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಈಗಾಗಲೇ ಪಟಾಕಿಗಳನ್ನು ಖರೀದಿ ಮಾಡಿರುವುದರಿಂದ ಸಮಸ್ಯೆ ತಲೆದೋರಿದೆ. 15 ದಿನದ ಹಿಂದೆ ಸರ್ಕಾರ ಆದೇಶ ಹೊರಡಿಸಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ನಿರ್ಧಾರ ಸರಿಯಿದೆಯಾದರೂ ವ್ಯಾಪಾರಸ್ಥರ ಹಿತ ಕಾಯುವುದೂ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಪಟಾಕಿ ಅಂಗಡಿ ಮಾಲೀಕರು ತಿಳಿಸಿದರು.