

ರಾಯಚೂರು: ಸ್ವಾತಂತ್ರಕ್ಕಾಗಿ ನಡೆದ ಹೋರಾಟದಲ್ಲಿ ಹರ್ಡೆಕರ್ ಮಂಜಪ್ಪ ಪ್ರಮುಖ ಪಾತ್ರ ವಹಿಸಿದ್ದು, ಸ್ವಾತಂತ್ರ ಹೋರಾಟದಲ್ಲಿ ಜನರ ಸಂಘಟನೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದು ಉಪನ್ಯಾಸಕಿ ಡಾ.ರೇಖಾ ಪಾಟೀಲ್ ಹೇಳಿದರು.
ಸ್ಥಳೀಯ ಬಸವ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಹರ್ಡೆಕರ್ ಮಂಜಪ್ಪ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಂಜಪ್ಪರು ಗಾಂೀಜಿ ಬದುಕುವುದರ ಜತೆಗೆ ಬಸವಣ್ಣರ ತತ್ತ್ವಗಳಿಗೆ ಆಕರ್ಷಿತರಾಗಿ, 1913ರಲ್ಲಿ ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಬಸವ ಜಯಂತಿ ಆಚರಣೆಗೆ ಕಾರಣಕೀಕರ್ತರಾದರು ಎಂದರು.
ರಾಷ್ಟ್ರೀಯತೆ, ದೇಶಭಕ್ತಿ, ಸತ್ಯಾಗ್ರಹ ಕುರಿತು ಅನೇಕ ಲೇಖನಗಳ ಪುಸ್ತಕಗಳನ್ನು ಮುದ್ರಿಸಿ ಬಸವ ಮತ್ತು ಗಾಂ ತತ್ತ್ವವನ್ನು ಪಸರಿಸುವಲ್ಲಿ ಹರ್ಡೆಕರರ ಪಾತ್ರ ಬಹು ದೊಡ್ಡದಾಗಿದ್ದು, ಅವರ ಜೀವನ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದು ತಿಳಿಸಿದರು.
ಕದಳಿ ವೇದಿಕೆ ಅಧ್ಯಕ್ಷೆ ಲಲಿತಾ ಬಸವನಗೌಡ ಮಾತನಾಡಿ, ಬಸವಾದಿ ಶರಣರ ವಚನಗಳ ಸಾರ ಮತ್ತು ಅವರ ತತ್ತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಆಚರಣೆಗೆ ತಂದಾಗ ಮಾತ್ರ ನಾವು ಬಸವಣ್ಣನವರಿಗೆ ನಿಜವಾದ ಗೌರವ ಮತ್ತು ಭಕ್ತಿ ಸಮರ್ಪಣೆ ಮಾಡಿದಂತಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಸವ ಕೇಂದ್ರದ ಅಧ್ಯಕ್ಷರಾದ ರಾಚನಗೌಡ ಕೋಳೂರು, ಪದಾಕಾರಿಗಳಾದ ಶಿವಕುಮಾರ ಮಾಟೂರು, ವಿಜಯಕುಮಾರ ಸಜ್ಜನ್, ಸುಗೂರಯ್ಯ ಹಿರೇಮಠ, ಮಲ್ಲಿಕಾರ್ಜುನ ಗುಡಿಮನಿ, ಸುಮಂಗಲಮ್ಮ ಹಿರೇಮಠ, ರತ್ನಾಕರ ಬಣಕಾರ ಉಪಸ್ಥಿತರಿದ್ದರು.