ಪರಿಶ್ರಮಕ್ಕೆ ಪ್ರತಿಲ ನಿಶ್ಚಿತ

IMG20250602205810.jpg
Published on

ಬೆಳಗಾವಿ: ಪರಿಶ್ರಮ ಹಾಗೂ ಶ್ರದ್ಧೆಯಿಂದ ಮಾಡಿದ ಕೆಲಸಕ್ಕೆ ಪ್ರತಿಫಲ ದೊರೆಯುತ್ತದೆ. ನಿಷ್ಠೆಯಿಂದ ವಿದ್ಯಾರ್ಥಿಗಳು ಅಭ್ಯಾಸದಲ್ಲಿ ನಿರತರಾಗಿ ಸಾಫಲ್ಯತೆ ಹೊಂದಬೇಕೆಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು

ಸೋಮವಾರ ನಗರದ ಕೆಎಲ್ಇ ಸಂಸ್ಥೆಯ ಲಿಂಗರಾಜ ಪದವಿ ಮಹಾವಿದ್ಯಾಲಯದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ದೊಡ್ಡ ಕನಸು ಹೊಂದಿರಬೇಕು. ಸತತ ಅಭ್ಯಾಸ ಹಾಗೂ ಪರಿಶ್ರಮದಿಂದ ಆ ಕನಸು ಸಾಕಾರಗೊಳಿಸಿಕೊಳ್ಳಬೇಕು. ತಮ್ಮ ಸಂಪೂರ್ಣ ಶಕ್ತಿ ವಿನಿಯೋಗಿಸಿ ಯಶಸ್ಸು ಗಳಿಸಬೇಕು ಎಂದರು.

ವಿದ್ಯಾರ್ಥಿಗಳಲ್ಲಿ ಬದ್ಧತೆ, ಏಕಾಗ್ರತೆ, ಸವಾಲುಗಳನ್ನು ಎದುರಿಸುವ ಧೈರ್ಯವಿರಬೇಕು. ಯುವ ಜನತೆ ಆಡಳಿತದಲ್ಲಿ ಭಾಗವಹಿಸಬೇಕು. ನಾಗರಿಕ ಸೇವಾ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಲ್ಲಿ ಭಯವಿರಬಾರದು. ಸರಿಯಾದ ಸಿದ್ಧತೆಯಿಂದ ಅವರು ಯಶಸ್ಸು ಪಡೆಯಬಹುದು. ಆ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಜೀವನ ಸಾಧನೆಗಳಿಂದ ಕೂಡಿರಬೇಕು. ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ. ಸಾಧಕರು ನಿರಂತರ ಪರಿಶ್ರಮದಿಂದ ಯಶಸ್ಸು ಪಡೆದಿದ್ದಾರೆ. ಪರಿಶ್ರಮ ವಿದ್ಯಾರ್ಥಿಗಳನ್ನು ಸಾಧನೆಯ ಮೇರು ಹಂತಕ್ಕೆ ತಲುಪಿಸುತ್ತದೆ. ಬದಲಾಗುತ್ತಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಅಗತ್ಯತೆಗೆ ತಕ್ಕಂತೆ ಶಿಕ್ಷಕರು ತಮ್ಮ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಸುಮಿತ್ ಮುತುಗೇಕರ್, ಸಾಹಿಲ್ ಜಾಧವ ಮತ್ತು ಶಶಾಂಕ್ ಪಾಟೀಲ ಅವರನ್ನು ಗೌರವಿಸಲಾಯಿತು. ಬಿಎ ಪದವಿಯಲ್ಲಿ ಕಾಲೇಜ್ ಆದರ್ಶ ವಿದ್ಯಾರ್ಥಿಗಳಾದ ಆಕಾಶ ಗುಡಗೆನಟ್ಟಿ ಮತ್ತು ಮಹೇಶ್ವರಿ ಕೋರಿ, ಬಿ.ಕಾಂ ಪದವಿಯಲ್ಲಿ ಸೋಹಮ್ ಔಲಕರ್ ಮತ್ತು ಧನ್ಯಾ ಶೆಟ್ಟಿ ಅವರನ್ನು ಸತ್ಕರಿಸಲಾಯಿತು.

ಡಾ.ಸಿ.ರಾಮರಾವ್, ಡಾ.ಜಿ.ಎನ್. ಶೀಲಿ, ಡಾ.ಸಿ.ಬಿ.ಕಮತಿ, ಡಾ.ಎಚ್.ಎಂ. ಚನ್ನಪ್ಪಗೋಳ ಉಪಸ್ಥಿತರಿದ್ದರು. ರೋಹಿಣಿ ಹಣಬರಟ್ಟಿ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ.ಹನಮಂತ ಮೇಲಿನಮನಿ ಸ್ವಾಗತಿಸಿದರು. ಡಾ.ಶಶಿಕಾಂತ ಕೊಣ್ಣೂರ ಪರಿಚಯಿಸಿದರು. ವಿನಾಯಕ ವರುಟೆ ಮತ್ತು ನಿಖಿತಾ ಬೆದರೆ ವಾರ್ಷಿಕ ವರದಿ ವಾಚಿಸಿದರು. ಸುಹಾನಿ ಮಗದುಮ ಮತ್ತು ಸಿದ್ದನಗೌಡ ಪಾಟೀಲ ನಿರೂಪಿಸಿದರು. ಲಕ್ಷ್ಮೀ ಶಿವಣ್ಣವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net