

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಗೀತ ಪರಿಶ್ರಮ, ಕಠಿಣ ಶ್ರದ್ಧೆಯಿಂದ ಒಲಿಯುವ ವಿದ್ಯೆ. ಸಂಗೀತ ಸಿದ್ಧಿಸಲು ಮೊದಲು ಉತ್ತಮ ಕೇಳುಗರಾಗಬೇಕು. ಒಳ್ಳೆ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಪಂ. ಎಂ. ವೆಂಕಟೇಶಕುಮಾರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ಸಂಭ್ರಮ 50ರ ಸಂಭ್ರಮ ನಿಮಿತ್ತ ಬುಧವಾರ ಆಯೋಜಿಸಿದ್ದ ಧರೆಗೆ ದೊಡ್ಡವರು ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಾಧನೆಗೆ ಪೂರಕ ವಾತಾವರಣ ಸೃಷ್ಟಿಸುವ ಶಕ್ತಿ ಸಂಗೀತಕ್ಕಿದ್ದು, ಯವ ಜನತೆ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಲಿ. ಬೇಗ ಸಾಧಕರಾಗುವ ಹಂಬಲ ಸಂಗೀತಗಾರ ಹಾಗೂ ಪಾಲಕರಿಗೆ ಇರಬಾರದು. ಪಂಚಾಕ್ಷರಿ ಮತ್ತು ಪುಟ್ಟರಾಜ ಗವಾಯಿಗಳು ನನಗೆ ಸಂಗೀತದ ಜತೆಗೆ ಸಂಸ್ಕಾರ ಕಲಿಸಿದರು ಎಂದರು.
ಪ್ರೊ. ಶಶಿಧರ ತೋಡಕರ ಮಾತನಾಡಿ, ಗದಗ ವಿರೇಶ್ವರ ಪುಣ್ಯಾಶ್ರಮದಲ್ಲಿ 12 ವರ್ಷ ಕಾಲ ಪಂ. ವೆಂಕಟೇಶಕುಮಾರ ಸಂಗೀತ ಅಭ್ಯಾಸ ಮಾಡಿದ್ದಾರೆ. ಅವರ ಈ ಸಾಧನೆಗೆ ಗವಾಯಿಗಳೇ ಕಾರಣ ಎಂದರು.
ಜಯದೇವಿ ಜಂಗಮಶೆಟ್ಟಿ ಮಾತನಾಡಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ, ಸತೀಶ ತುರಮರಿ, ಇತರರು ಇದ್ದರು.