

ಸರಗೂರು: ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲೂಕಿನ ಲಂಕೆ ಗ್ರಾಮದಲ್ಲಿ ಲಂಕೆ-ಚಂದ್ರವಾಡಿ ರಸ್ತೆ, ಬರ‌್ವಾಳ್-ಮುಳ್ಳೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ನೂತನ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಅನುದಾನ ಕೋರಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. 100 ಹಾಸಿಗೆ ಆಸ್ಪತ್ರೆ, ಅಗ್ನಿಶಾಮಕದಳ, ಮಿನಿ ವಿಧಾನಸೌಧ, ನ್ಯಾಯಾಲಯ ಅವಶ್ಯಕತೆ ಇದೆ. ಸಾರ್ವಜನಿಕರು ಸರ್ಕಾರಿ ಕೆಲಸಗಳಿಗಾಗಿ ಅಲೆಯುವುದನ್ನು ತಪ್ಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಜಿಪಂ ಮಾಜಿ ಸದಸ್ಯ ಪಿ.ರವಿ ಮಾತನಾಡಿ, ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ ಅವರ ಪರಿಶ್ರಮದಿಂದಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗುತ್ತಿವೆ. ಮುಂದಿನ ದಿನಗಳಲ್ಲಿಯೂ ಆಗಲಿವೆ. ಹೀಗಾಗಿ ಎಲ್ಲರೂ ಶಾಸಕರಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಶಂಭುಲಿಂಗನಾಯಕ, ಕೆ.ಚಿಕ್ಕವೀರನಾಯಕ, ಭಾಗ್ಯಲಕ್ಷ್ಮೀ, ದೇವಲಾಪುರ ಸಿದ್ದರಾಜು, ಕುರ್ಣೇಗಾಲ ಬೆಟ್ಟಸ್ವಾಮಿ, ಮುಳ್ಳೂರು ಮಂಜು, ಕಂದೇಗಾಲ ಶಿವರಾಜು, ಬರ‌್ವಾಳ್ ಚಿಕ್ಕಣ್ಣ, ಲೋಕೇಶ್, ನಾಗರಾಜು, ಪುಟ್ಟು, ಶ್ರೀನಿವಾಸ್, ಸೋಮಶೇಖರ್ ಇತರರು ಹಾಜರಿದ್ದರು.