ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ, ಏಕಾಗ್ರತೆ ಮುಖ್ಯ

sanmana
Published on

ಕುಶಾಲನಗರ: ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ, ಏಕಾಗ್ರತೆ ಮುಖ್ಯ ಎಂದು ನಿವೃತ್ತ ಪ್ರಾಂಶುಪಾಲ ಡಾ.ದೇವರಾಜು ಕಿವಿಮಾತು ಹೇಳಿದರು.

ಕಾವೇರಿ ನದಿ ದಂಡೆಯಲ್ಲಿರುವ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನ ದ್ವಿತೀಯಾ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಕಾಲೇಜು ಆವರಣದಲ್ಲಿ ಶನಿವಾರ ನಡೆದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ವ್ಯಾಸಾಂಗದ ಅವಧಿಯಲ್ಲಿ ಕಠಿನ ಪರಿಶ್ರಮ, ಏಕಾಗ್ರತೆ ಹಾಗೂ ಸಮಯ ಪಾಲನೆ ಮೈಗೂಡಿಸಿಕೊಳ್ಳಬೇಕು. ಹೆತ್ತವರಿಗೆ ಸದಾ ಗೌರವ ನೀಡುವ ಮೂಲಕ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಕರೆಕೊಟ್ಟರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತಾಧಿಕಾರಿ ಬಿ.ಜೈವರ್ಧನ್ ಮಾತನಾಡಿ, ಸಮಾಜದಲ್ಲಿನ ಸಾಧಕರು ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕಿದೆ. ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ ಜೀವನದ ಗುರಿ ತಲುಪಲು ಕಠಿಣವಾಗಲಾರದು. ವ್ಯಾಸಾಂಗದ ಅವಧಿಯನ್ನು ಸಮರ್ಥವಾಗಿ ಎದುರಿಸುವ ಮೂಲಕ ಅಂದುಕೊಂಡ ಗುರಿ ಸಾಧಿಸಿದಲ್ಲಿ ಇಡೀ ಜೀವನಕ್ಕೆ ಅದು ಬೆಳಕು ತರುತ್ತದೆ ಎಂದರು.

ಕನ್ನಡ ಭಾರತಿ ಪದವಿ ಕಾಲೇಜು ವಿಭಾಗದ ಪ್ರಾಂಶುಪಾಲ ಕೆ.ಎಸ್.ರುದ್ರಪ್ಪ ಮಾತನಾಡಿದರು. ಕಾಲೇಜಿನ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ಡಾ.ಎನ್.ನಾಗೇಂದ್ರ ಸ್ವಾಮಿ ಪ್ರಾಸ್ತಾವಿಕ ನುಡಿಗಳಾಡಿದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಗೆ ಕಲಾವಿಭಾಗದಲ್ಲಿ ಎರಡನೇ ಸ್ಥಾನವನ್ನು ಗಳಿಸಿದ ವಿದ್ಯಾರ್ಥಿ ನವನೀತನ್ ಅವರನ್ನು ಸನ್ಮಾನಿಸಲಾಯಿತು. ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕನ್ನಡ ಭಾಷಾ ವಿಷಯದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿನಿ ಮನ್ವಿತ ಅವರನ್ನು ಕೂಡ ಸತ್ಕರಿಸಲಾಯಿತು. ಉಪನ್ಯಾಸಕಿ ರಶ್ಮಿ ನಿರೂಪಿಸಿ, ಸ್ವಾಗತಿಸಿದರೆ ನಾಗರತ್ನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net