ಯಶಸ್ಸು ಸಾಧಿಸಲು ಪರಿಶ್ರಮ, ತಾಳ್ಮೆ ಅವಶ್ಯ: ಪ್ರಾಂಶುಪಾಲ ಡಾ. ಚಂದ್ರಜಿತ್ ಮೋಹನ್

18
Published on

ಮೈಸೂರು: ಜೀವನದಲ್ಲಿ ಯಶಸ್ಸು ಸಾಧಿಸಲು ಸತತ ಪರಿಶ್ರಮ, ತಾಳ್ಮೆ ಅವಶ್ಯ ಎಂದು ಮೈಸೂರು ಎಂಐಟಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರಜಿತ್ ಮೋಹನ್ ಹೇಳಿದರು.

ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ಗಣಕ ವಿಜ್ಞಾನ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ಕಲಿಕೆಯಲ್ಲಿ ಉತ್ಕೃಷ್ಟತೆಯನ್ನು ಸಾಧಿಸಲು ಸಶಕ್ತ ಕೌಶಲ, ಉದ್ದೇಶ ಮತ್ತು ಪ್ರೇರಣೆಯ ಜೀವನ ಪಾಠಗಳು ವಿಷಯ ಕುರಿತು ಅವರು ಮಾತನಾಡಿದರು.

ನಮ್ಮ ಬೌದ್ಧಿಕ ಕ್ಷಮತೆ ಮತ್ತು ದೈಹಿಕ ಸಾಮರ್ಥ್ಯವನ್ನು ಮತ್ತೊಬ್ಬರಿಗೆ ಹೋಲಿಕೆ ಮಾಡಿಕೊಳ್ಳಬಾರದು. ನಮ್ಮ ಸಾಮರ್ಥ್ಯ ಹಾಗೂ ಅಭಿರುಚಿಗೆ ಅನುಗುಣವಾಗಿ ಕಲಿಕೆಯಲ್ಲಿ ತೊಡಗಿಸಿಕೊಂಡಾಗ ಯಶಸ್ಸು ಸಾಧ್ಯವಾಗುತ್ತದೆ. ಗುರಿ ಇಲ್ಲದ ಬದುಕು ನಾವಿಕನಿಲ್ಲದ ದೋಣಿಯಂತೆ ಎಂದರು.

ಸಾಧಕರ ಸಾಧನೆಗಳು ಪ್ರೇರಣೆಯಾಗಬೇಕೆ ಹೊರತು ಅನುಕರಣೆಯಾಗಬಾರದು. ಅವರಂತೆಯೇ ನಾವು ಆಗಬೇಕು ಎನ್ನುವುದು ಸರಿ, ಆದರೆ ಅದು ನಮ್ಮ ವ್ಯಕ್ತಿತ್ವ ಹಾಗೂ ಅಸ್ತಿತ್ವವನ್ನು ಅಳಿಸಬಾರದು. ನಮ್ಮ ಅತಿಯಾದ ನಿರೀಕ್ಷೆಗಳು ನಿರಾಸೆಗೆ ಕಾರಣವಾಗಬಹುದು. ಆಧುನಿಕ ಶಿಕ್ಷಣ ಪದ್ಧತಿಯೊಂದಿಗೆ ನಮ್ಮ ಪಾರಂಪರಿಕ ಜ್ಞಾನ ಅತ್ಯಮೂಲ್ಯವಾದದ್ದು ಎಂದು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು.

ಪ್ರಾಂಶುಪಾಲ ಡಾ.ರೇಚಣ್ಣ, ವಿವಿಧ ವಿಭಾಗ ಮುಖ್ಯಸ್ಥರಾದ ಬಿ. ಧ್ರುವಕುಮಾರ್, ಎಚ್.ಜಿ. ಪ್ರದೀಪ್, ವಿದ್ಯಾಥಿಗಳಾದ ಕೀರ್ತನಾ, ಮೇಘನಾ, ಆರ್.ವಿ.ನಂದಿನಿ, ಎಚ್.ಪ್ರೀತಿ, ಪಿ.ಎಸ್. ಸಹನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net