

ಹೆಬ್ರಿ: ವಿದ್ಯಾರ್ಥಿಗಳು ಮುಂದೆ ಕಾರ್ಪೊರೇಟ್ ಕ್ಷೇತ್ರಗಳಲ್ಲಿ ಹುದ್ದೆ ಪಡೆದುಕೊಳ್ಳಬೇಕಾದರೆ, ಕಠಿಣ ಪರಿಶ್ರಮ ಹಾಗೂ ಸ್ಪಷ್ಟ ಗುರಿ ಹೊಂದಿರಬೇಕು ಎಂದು ಪ್ರಾಂಶುಪಾಲ ಡಾ.ವಿದ್ಯಾಧರ ಹೆಗ್ಡೆ ಎಸ್. ಹೇಳಿದರು.
ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಸಂಘ, ಐ.ಕ್ಯು.ಎ.ಸಿ, ಪ್ಲೇಸ್ಮೆಂಟ್ ಸೆಲ್, ಪ್ರೇರಣ ಘಟಕ ಆಶ್ರಯದಲ್ಲಿ ರೆಸ್ಯುಮೆ ಟು ರಿಕ್ರುಟ್ಮೆಂಟ್ ವಿಷಯದಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳಿಗೆ ಮೃದು ಕೌಶಲ ಅಭಿವೃದ್ಧಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ಉನ್ನತಿ ಫೌಂಡೇಷನ್ ಚೇಂಜ್ ಮೇಕರ್ ರೇಷ್ಮಾ ಕಿರಣ್ ಪೂಜಾರಿ ಕಾರ್ಯಾಗಾರ ಉದ್ಘಾಟಿಸಿದರು. ಉದ್ಯೋಗ ಮಾಹಿತಿ ಘಟಕ ಸಂಚಾಲಕ ವಿಘ್ನೇಶ್ವರ ರಾವ್, ವಾಣಿಜ್ಯ ವಿಭಾಗ ಮುಖ್ಯಸ್ಥ ಡಾ.ಗಣೇಶ ಎಸ್., ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ಡಾ.ಪ್ರವೀಣ್ ಕುಮಾರ್ ಎಸ್. ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಕ್ಷತಾ ನಿರೂಪಿಸಿದರು. ಸಂಗೀತಾ ಅತಿಥಿಗಳನ್ನು ಸ್ವಾಗತಿಸಿದರು. ಅಮರ್ ವಂದಿಸಿದರು.