ಕಾಯಕಲ್ಪದ ನಿರೀಕ್ಷೆಯಲ್ಲಿ ಬಂದರು ಪ್ರದೇಶ!, ಕೋಟ್ಯಾಂತರ ರೂ. ವ್ಯವಹಾರ ನಡೆಸು ಪ್ರದೇಶದಲ್ಲಿ ರಸ್ತೆ ಕೊರತೆ, ಸ್ಮಾರ್ಟ್‌ಸಿಟಿ ಯೋಜನೆಯಡಿ ಬಂದರು ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ವೇಗ

mng_13 jun Mangalore Old Port
Published on

ಮಂಗಳೂರು: ಮಂಗಳೂರಿನ ಪ್ರಮುಖ ಚಿಲ್ಲರೆ ಹಾಗೂ ಬೃಹತ್ ಆರ್ಥಿಕ ಕೇಂದ್ರವಾಗಿರುವ ಸ್ಟೇಟ್‌ಬ್ಯಾಂಕ್ ಸನಿಹದ ಸರಿಸುಮಾರು 4 ಕಿ.ಮೀ. ಪರಿಧಿಯ ಬಂದರು ಪ್ರದೇಶ ಇದೀಗ ಕಾಯಕಲ್ಪದ ನಿರೀಕ್ಷೆಯಲ್ಲಿದೆ.

ಬಂದರು ಪ್ರದೇಶವೆಂದರೆ ಇಕ್ಕಟ್ಟಾದ ಪ್ರದೇಶ ಎಂಬ ಸಾರ್ವತ್ರಿಕ ಮಾತಿದೆ. ಹೀಗಾಗಿ ಇಲ್ಲಿ ವಾಹನ ಚಲಾಯಿಸುವುದು ಕೂಡ ಅಷ್ಟೇ ಕಷ್ಟ. ಕಿರಿದಾದ ರಸ್ತೆಯಲ್ಲಿ ಟ್ರಾಫಿಕ್ ಕಿರಿಕಿರಿ ಸಾಮಾನ್ಯ. ಜತೆಗೆ ರಸ್ತೆಯಲ್ಲೇ ಲೋಡಿಂಗ್-ಅನ್‌ಲೋಡಿಂಗ್, ವ್ಯಾಪಾರ ವಹಿವಾಟು ನಡೆದು ಸಮಸ್ಯೆ ಉಲ್ಭಣವಾಗುತ್ತಲೇ ಇದೆ. ಪಾರ್ಕಿಂಗ್ ಜಾಗ ಎಂಬುದು ಇಲ್ಲಿ ಇಲ್ಲವೇ ಇಲ್ಲ. ಕಳೆದ 10 ವರ್ಷಗಳ ಆರ್ಥಿಕ ವರ್ಷದಲ್ಲಿ ಸರ್ಕಾರಕ್ಕೆ ಅತೀ ಹೆಚ್ಚು ಆದಾಯ ಕೊಡುವ ಪ್ರದೇಶವಾದ ಬಂದರು ಭಾಗದ ಅಭಿವೃದ್ಧಿ ನಿಟ್ಟಿನಲ್ಲಿ ಮಹತ್ವದ ಕಾರ್ಯವನ್ನು ದ.ಕ. ಜಿಲ್ಲಾಡಳಿತ ಹಾಗೂ ಮಂಗಳೂರು ಪಾಲಿಕೆ ಏಕಮನಸಿನಿಂದ ನಡೆಸಬೇಕಾದ ಅನಿವಾರ್ಯತೆ ಇದೆ.

*ಕುಡಿಯುವ ನೀರಿನ ಸಮಸ್ಯೆ

ವಾಣಿಜ್ಯ ಚಟುವಟಿಕೆ ನಡೆಸುವ ಲೋವರ್ ಬಂದರ್ ಪ್ರದೇಶದ ಕೆಲವು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದೆ. ಅಂಗಡಿಯವರು ಪರ್ಯಾಯವಾಗಿ ನೀರಿನ ವ್ಯವಸ್ಥೆಯನ್ನು ಮಾಡಿಕೊಳ್ಳುವಂತಾಗಿದೆ. ಇಲ್ಲಿ ಬಹುತೇಕ ವರ್ತಕರು ಟ್ಯಾಂಕರ್ ನೀರನ್ನೇ ಅವಲಭಿಸುವಂತಾಗಿದೆ. ಜಲಸಿರಿ ಯೋಜನೆಯಡಿ ಈ ಭಾಗದ ಹಲವೆಡೆ ನೀರಿನ ಸಂಪರ್ಕವಿದ್ದರೂ ಯೋಜನೆ ಕಾರ್ಯಾರಂಭಗೊಳ್ಳದಿರುವುದರಿಂದ ನೀರಿನ ಪೂರೈಕೆಯಾಗಿಲ್ಲ.

-----------------

ಸ್ಮಾರ್ಟ್‌ಸಿಟಿ ಕಾಮಗಾರಿಗಳಿಗೆ ವೇಗ

ಕೋಟ್ಯಾಂತರ ರೂ. ವ್ಯವಹಾರ ನಡೆಸುವ ಬಂದರು ಪ್ರದೇಶದಲ್ಲಿ ಕಿರಿದಾದ ರಸ್ತೆಯಿಂದ ಎಲ್ಲವೂ ಇಕ್ಕಟ್ಟಿನ ಪರಿಸ್ಥಿತಿ. ರಸ್ತೆಯಲ್ಲಿಯೇ ವ್ಯಾಪಾರ ನಡೆಸುವ ಪರಿಣಾಮ ಇಲ್ಲಿ ವಾಹನಗಳು ಕ್ಯೂ ನಿಲ್ಲುವ ಪರಿಸ್ಥಿತಿ ಇದೆ. ಸುದೀರ್ಘ ವರ್ಷದ ಈ ಸಮಸ್ಯೆಗೆ ಇನ್ನೂ ಪರಿಹಾರವೇ ದೊರಕಿಲ್ಲ. ವ್ಯಾಪಾರಿಗಳ ನೋವು ಇಲ್ಲಿ ಕೇಳುವವರೇ ಇಲ್ಲ ಎಂಬುವುದು ಸ್ಥಳೀಯ ವ್ಯಾಪಾರಿಯೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ. ಈ ಮಧ್ಯೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಬಂದರು ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ವೇಗ ಪಡೆದಿದೆ. ಇಲ್ಲಿನ ಚರಂಡಿ, ಒಳಚರಂಡಿ, ರಸ್ತೆ ಹೀಗೆ ಎಲ್ಲಾ ವಿಧದ ಚಟುವಟಿಕೆ ನಡೆಯುತ್ತಿದೆ. ಆದರೆ, ಇಕ್ಕಟ್ಟಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

-----------------

ಸ್ಮಾರ್ಟ್ ಬಂದರಿನ ಪ್ರಮುಖ ಅಗತ್ಯಗಳೇನು?

ಜಿಲ್ಲೆಯ ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ಸ್ಟೇಟ್‌ಬ್ಯಾಂಕ್ ಸನಿಹದ ಸರಿಸುಮಾರು 4 ಕಿ.ಮೀ. ಪರಿಧಿಯ ಪ್ರದೇಶವನ್ನು ಸಂಪರ್ಕಿಸುವ ರಸ್ತೆ ಮೇಲ್ದರ್ಜೆಗೆರುವುದು ಇಲ್ಲಿನ ಪ್ರಮುಖ ಅಗತ್ಯತೆಯಲ್ಲೊಂದು. ಆಹಾರ ವಸ್ತುಗಳು ಇಲ್ಲಿ ಯಥೇಚ್ಚ ಇರುವುದರಿಂದ ಧೂಳುಮುಕ್ತ ರಸ್ತೆಗೆ ಒತ್ತು ನೀಡುವುದು ಅಗತ್ಯ. ಮಳೆನೀರು, ಒಳಚರಂಡಿ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡುವುದು, ಗೂಡ್ಸ್‌ಲಾರಿ, ವಾಹನಗಳ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ರಸ್ತೆಯಲ್ಲಿ ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ, ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆ ಅಗತ್ಯವಿದೆ.

------------------

ಸ್ಟೇಟ್‌ಬ್ಯಾಂಕ್ ಸನಿಹದ ಸರಿಸುಮಾರು 4 ಕಿ.ಮೀ. ಪರಿಧಿಯ ಪ್ರದೇಶದ ರಸ್ತೆಗಳನ್ನು ಒಂದಕ್ಕೊಂದು ಸಂಪರ್ಕಿಸಲು ಇಲ್ಲಿನ ರಸ್ತೆಗಳನ್ನು ಅಗಲೀಕರಣಗೊಳಿಸಿ ಅಭಿವೃದ್ದಿಪಡಿಸುವ ಯೋಜನೆ ಇದೆ. ಈಗಾಗಲೇ ಬಸ್‌ನಿಲ್ದಾಣ ಸುತ್ತಮುತ್ತ ಸ್ಮಾರ್ಟ್ ಸಿಟಿ ಯೋಜಜೆಯಡಿ ಅಭಿವೃದ್ದಿ ಕಾಮಗಾರಿ ನಡೆಸಲಾಗಿದೆ. ಇನ್ನೂ ಹೆಚ್ಚಿನ ಯೋಜನೆಗಳನ್ನು ಸ್ಮಾರ್ಟ್ ಸಿಟಿ ಹಮ್ಮಿಕೊಳ್ಳಲಿದೆ.

ಅರುಣ್ ಪ್ರಭಾ, ಜನರಲ್ ಮೆನೇಜರ್, ಸ್ಮಾರ್ಟ್ ಸಿಟಿ- ಮಂಗಳೂರು

--------------------

ದ.ಕ ಜಿಲ್ಲೆಯ ಪ್ರಮುಖ ವ್ಯಾಪಾರ ಕೇಂದ್ರವಾಗಿ ಗುರುತಿಸಿರುವ ಸ್ಟೇಟ್‌ಬ್ಯಾಂಕ್, ಬಂದರು ಪ್ರದೇಶದ ಅಭಿವೃದ್ದಿಗೆ ಸ್ಮಾರ್ಟ್ ಸಿಟಿ ಜತೆ ಮಂಗಳೂರು ಮಹಾನಗರ ಪಾಲಿಕೆಯೂ ಕೈ ಜೋಡಿಸಲಿದೆ. ಈಗಾಗಲೇ ಪಾಲಿಕೆ ವತಿಯಿಂದ ಇಲ್ಲಿನ ಮೂಲಭೂತ ಸೌಕರ್ಯ ಅಭಿವೃಧ್ದಿಗೆ ಪೂರಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಇನ್ನೂ ಹೆಚ್ಚಿನ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪಾಲಿಕೆ ಸಿದ್ದವಿದೆ.

ಸುಧೀರ್ ಶೆಟ್ಟಿ ಕಣ್ಣೂರು, ಮೇಯರ್, ಮಂಗಳೂರು ಮಹಾನಗರ ಪಾಲಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net