

ಮಂಗಳೂರು: ರಾಜ್ಯದಲ್ಲಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಗೊಂದಲದಿಂದ ಕೂಡಿದ್ದು, ಶಿಕ್ಷಕರಿಗೆ ಕಿರುಕುಳ, ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಸಮೀಕ್ಷೆಯಿಂದಾಗಿ ದಸರಾ ಸಂದರ್ಭ ಶಿಕ್ಷಕರ ಸಹಿತ ಸರಕಾರಿ ನೌಕರರು ಹಬ್ಬದಲ್ಲಿ ಭಾಗವಹಿಸದಂತೆ ಮಾಡಲಾಗಿದೆ. ಈಗಿನ ಸ್ಥಿತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆ ಸಾಧ್ಯವಿಲ್ಲ. ಸಮೀಕ್ಷೆಯಲ್ಲಿನ ಗೊಂದಲ ನಿವಾರಿಸಿ, ದಿನಾಂಕ ವಿಸ್ತರಿಸಬೇಕು ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತಣಾಡಿದ ಅವರು, ಯಾವುದೇ ತಯಾರಿ ನಡೆಸದೇ, ತರಬೇತಿ ನೀಡದೆ, ಸಿಬ್ಬಂದಿ ನೇಮಕ ಮಾಡದೆ ಸಮೀಕ್ಷೆ ಆರಂಭಿಸಲಾಗಿದೆ. ಸರ್ವರ್ ಸಮಸ್ಯೆ, ಜನರು ಒಟಿಪಿ ನೀಡಲು ಒಪ್ಪದಿ ರುವುದು, ಮಾಹಿತಿ ನೀಡಲು ನಿರಾಕರಣೆ ಸಹಿತ ವಿವಿಧ ಕಾರಣಗಳಿಂದ ಸಮೀಕ್ಷೆ ಗೊಂದಲವಾಗಿದೆ. ದಸರಾ ಸಂದರ್ಭ ಸಮೀಕ್ಷೆ ಹಮ್ಮಿಕೊಂಡಿರುವ ಕಾರಣ ಶಿಕ್ಷಕರಿಗೆ ರಜೆ ಇಲ್ಲದಾಗಿದೆ. ಜಿಲ್ಲೆಯ ಶಾಲೆಗಳಲ್ಲಿ ಶಾರದಾ ಪೂಜೆ ನಡೆಸಲು ಸಾಧ್ಯವಾಗಿಲ್ಲ. ಶಾಲೆಗಳಲ್ಲಿ ಶಾರದಾ ಪೂಜೆ ನಿಲ್ಲಿಸುವ ರಾಜ್ಯ ಸರಕಾರದ ಷಡ್ಯಂತ್ರದ ಭಾಗವವಾಗಿ ಶಿಕ್ಷಕರನ್ನು ಸಮೀಕ್ಷೆಗೆ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಇಬ್ಬರು ಶಿಕ್ಷಣಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಶಿಕ್ಷಕರು ಕುಟುಂಬದ ಜತೆ ಹಬ್ಬ ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದರು.
ದಸರಾ ಸಂದರ್ಭ ಸಮೀಕ್ಷೆ ನಡೆಸುವುದನ್ನು ಬಿಜೆಪಿ ಆರಂಭದಲ್ಲೇ ವಿರೋಧಿಸಿತ್ತು. ದಸರಾ ರಜೆಯಲ್ಲಿ ಉದ್ದೇಶಪೂರ್ವಕವಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಇದರಿಂದಾಗಿ ಶಿಕ್ಷಕರಿಗೆ, ಸರಕಾರಿ ನೌಕರರಿಗೆ ತೊಂದರೆಯಾಗಿದೆ. ನರ್ಸ್‌ಗಳು, ಹೊರಗುತ್ತಿಗೆ ನೌಕರನ್ನೂ ನಿಯೋಜಿಸಲಾಗಿದೆ. ಶಿಕ್ಷಕರಿಗೆ ಬೆಳಗ್ಗೆ 6ರ ವೇಳೆಗೇ ಕರೆ ಮಾಡಿ ಒತ್ತಡ ಹೇರಲಾಗುತ್ತಿದೆ. ಬೇರೆ ಸಮುದಾಯದವರ ಹಬ್ಬದ ವೇಳೆ ಈ ರೀತಿ ಮಾಡಿದ್ದರೆ ಸುಮ್ಮನಿರುತ್ತಿದ್ದರೇ? ಸಿದ್ದರಾಮಯ್ಯ ಸರ್ಕಾರ ಹಿಂದುಗಳ ಭಾವನೆಗೆ ಗೌರವ ನೀಡುತ್ತಿಲ್ಲ ಎಂದರು.
ಸಮೀಕ್ಷೆ ಸಂದರ್ಭ ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗ ಹೇಳಿದೆ. ಎಲ್ಲ 60 ಪ್ರಶ್ನೆಗಳಿಗೆ ಜನತೆ ಉತ್ತರ ನೀಡುತ್ತಿಲ್ಲ. ಜತೆಗೆ ಸಮೀಕ್ಷೆ ಆಪ್, ಸರ್ವರ್ ಸಮಸ್ಯೆ ಇದೆ. ಸಮೀಕ್ಷೆ ನ್ಯಾಯಯುತವಾಗಿ ನಡೆಯುತ್ತಿಲ್ಲ ಎಂಬ ಅನುಮಾನ ನಮಗಿದೆ. ಹೀಗಾದರೆ ಈ ಹಿಂದಿನ ಸಮೀಕ್ಷೆಯಂತೆ ಇದೂ ವಿಫಲವಾಗಲಿದೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಜಿಲ್ಲಾ ವಕ್ತಾರರಾದ ರಾಜಗೋಪಾಲ ರೈ, ಅರುಣ್ ಶೇಟ್, ಕಾರ್ಯಾಲಯ ಕಾರ್ಯದರ್ಶಿ ಗುರುಚರಣ್, ಮಾಧ್ಯಮ ಸಂಚಾಲಕ ವಸಂತ ಪೂಜಾರಿ ಉಪಸ್ಥಿತರಿದ್ದರು.