

ಸಾಗರ: ಅಸ್ತಿತ್ವವಿಲ್ಲದ ಅರಣ್ಯಹಕ್ಕು ಸಮಿತಿ ಮೂಲಕ ಅರಣ್ಯವಾಸಿಗಳಿಗೆ ನೋಟಿಸ್ ಜಾರಿಗೊಳಿಸಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ರವೀಂದ್ರ ನಾಯ್ಕ ಮಾತನಾಡಿ, ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಅರಣ್ಯಹಕ್ಕು ಸಮಿತಿ ಅಸ್ತಿತ್ವದಲ್ಲಿ ಇಲ್ಲ. ಅಸ್ತಿತ್ವದಲ್ಲಿ ಇಲ್ಲದ ಅರಣ್ಯಹಕ್ಕು ಸಮಿತಿ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸುತ್ತಿದೆ. ಜನಪ್ರತಿನಿಧಿಗಳೇ ಇಲ್ಲದೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಮಿತಿ ಸಭೆ ನಡೆಸಿದರೆ ಜನರಿಗೆ ನ್ಯಾಯ ಸಿಗುವುದಿಲ್ಲ ಎಂದು ಹೇಳಿದರು.
ಸಾಗರ ತಾಲೂಕಿನ ಜೋಗ ಸೇರಿದಂತೆ ಬೇರೆ ಬೇರೆ ಕಡೆ ಅರಣ್ಯ ಇಲಾಖೆ ಅರಣ್ಯವಾಸಿಗಳಿಗೆ ನೋಟಿಸ್ ನೀಡಿ ಒಕ್ಕಲೆಬ್ಬಿಸುವ ಭೀತಿಯನ್ನು ಹುಟ್ಟಿಸುತ್ತಿರುವುದು ಖಂಡನೀಯ. ಹಾಲಿ ಇರುವ ಅರಣ್ಯ ಸಮಿತಿ ಕಾನೂನು ಬಾಹಿರವಾಗಿದ್ದು ಮುಂದಿನ 10 ದಿನಗಳಲ್ಲಿ ಈ ಕುರಿತು ಅಧಿಕಾರಿಗಳು ಸ್ಪಷ್ಟನೆ ನೀಡಬೇಕು. ರೈತರಿಗೆ ನೀಡಿರುವ ನೋಟಿಸ್ ಹಿಂದಕ್ಕೆ ಪಡೆಯಬೇಕು. ಅನವಶ್ಯಕ ವನವಾಸಿಗಳಿಗೆ ಕಿರುಕುಳ ಕೊಡಲು ಆರಂಭಿಸಿದರೆ ಮುಂದಿನ ಕಠಿಣ ಪರಿಣಾಮವನ್ನು ಅರಣ್ಯಾಧಿಕಾರಿಗಳು ಎದುರಿಸಬೇಕಾಗುತ್ತದೆ ಎಂದರು.
ಮಲೆನಾಡು ರೈತ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ಅರಣ್ಯವಾಸಿಗಳಿಗೆ ಸಹಜ ನ್ಯಾಯ ನೀಡಿ, ಸ್ಥಾನಿಕ ಜನರನ್ನು ಒಕ್ಕಲೆಬ್ಬಿಸಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಅಧಿಕಾರಿಗಳು ಸಾವಿರಾರು ಅರ್ಜಿಗಳನ್ನು ವಜಾಗೊಳಿಸಿ ರೈತರನ್ನು ಆತಂಕಕ್ಕೆ ದೂಡುತ್ತಿದ್ದಾರೆ. ಜೋಗದಲ್ಲಿ ಕಾಗೋಡು ತಿಮ್ಮಪ್ಪ ಅವರ ಆಡಳಿತ ಅವಧಿಯಲ್ಲಿ 600 ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಈಗ ಅವರಿಗೆ ಅರಣ್ಯ ಇಲಾಖೆ ತಮ್ಮ ಜಾಗ ಎಂದು ಸ್ಪಷ್ಟನೆ ಕೇಳಿ ನೋಟಿಸ್ ಜಾರಿಗೊಳಿಸುತ್ತಿರುವುದು ಖಂಡನೀಯ. ತಕ್ಷಣ ಜೋಗದ ನಿವಾಸಿಗಳಿಗೆ ನೀಡಿರುವ ನೋಟಿಸ್ ಹಿಂದಕ್ಕೆ ಪಡೆಯಬೇಕು. ಯಾವುದೇ ಕಾರಣಕ್ಕೂ ವಿಶ್ವ ವಿಖ್ಯಾತ ಜೋಗ ಜಲಪಾತವಿರುವ ಪ್ರದೇಶದ ಸುತ್ತಮುತ್ತ ವಾಸಿಸುತ್ತಿರುವ ಜನರನ್ನು ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಿದರು.
ಜೋಗ ಅರಣ್ಯಹಕ್ಕು ಸಮಿತಿ ಅಧ್ಯಕ್ಷ ಎಸ್.ಎಲ್.ರಾಜಕುಮಾರ್ ಮಾತನಾಡಿ, 30 ವರ್ಷಗಳಿಂದ ನಾವು ವಾಸಿಸುತ್ತಿರುವ ಭೂಮಿ ಅರಣ್ಯಕ್ಕೆ ಸೇರಿದ್ದೆಂದು ಇಲಾಖೆ ನೋಟಿಸ್ ನೀಡಿ ನಮ್ಮನ್ನು ಒಕ್ಕಲೆಬ್ಬಿಸಲು ಮುಂದಾಗಿದೆ. 2016ರಲ್ಲಿ ಅರಣ್ಯಹಕ್ಕು ಕಾಯ್ದೆಯಡಿ ನಾವು ಅರ್ಜಿ ಸಲ್ಲಿಸಿದ್ದೇವೆ. ನಾವು ಸಲ್ಲಿಸಿದ ಎಲ್ಲ ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು ಎಲ್ಲರಿಗೂ ನೋಟಿಸ್ ನೀಡಲಾಗುತ್ತಿದೆ. ನೋಟಿಸ್ ನೀಡಿದ್ದು ಕಾನೂನು ಬಾಹಿರವಾಗಿದ್ದು ಮುಂದಿನ ಎರಡ್ಮೂರು ದಿನಗಳಲ್ಲಿ ನಮ್ಮ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ, ಲಕ್ಷ್ಮೀರಾಜು, ವೀರಭದ್ರ ನಾಯ್ಕ, ಸುರೇಶ್ ಇತರರಿದ್ದರು.