ರೈತರಿಗೆ ಕಿರುಕುಳ ನೀಡಿದರೆ ಸಹಿಸಲ್ಲ

19blrp3
ಬೇಲೂರು ತಾಲೂಕಿನ ಶಿವಪುರ ಕಾವಲಿನ ಕಂದಾಯ ಜಮೀನು ಸುತ್ತ ಅರಣ್ಯ ಇಲಾಖೆಯವರು ಹಿಟಾಚಿಯಿಂದ ಟ್ರೆಂಚ್ ತೆಗೆದಿದ್ದರಿಂದ ರೈತರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಸಭೆ ನಡೆಸಿದರು.
Published on

ಬೇಲೂರು: ತಾಲೂಕಿನ ಶಿವಪುರ ಕಾವಲಿನ ಕಂದಾಯ ಜಮೀನು ಸುತ್ತ ಅರಣ್ಯ ಇಲಾಖೆಯವರು ಹಿಟಾಚಿಯಿಂದ ಟ್ರೆಂಚ್ ತೆಗೆದಿರುವುದನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸೋಮವಾರ ಅಡಗೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶಾಸಕ ಎಚ್.ಕೆ.ಸುರೇಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಅರಣ್ಯ ಇಲಾಖೆ, ಪೊಲೀಸ್, ಗ್ರಾಮ ಅರಣ್ಯ ಸಮಿತಿ ಹಾಗೂ ರೈತರ ಸಮ್ಮುಖದಲ್ಲಿ ಶಾಸಕ ಎಚ್.ಕೆ.ಸುರೇಶ್ ಸಭೆ ನಡೆಸಿದರು. ಶಿವಪುರ ಕಾವಲಿನ ರೈತರು ಹಾಗೂ ಅರಣ್ಯ ಅಧಿಕಾರಿಗಳೊಂದಿಗೆ ಮಾತುಕಥೆ ನಡೆಸಿದರು. ಅರಣ್ಯ ಇಲಾಖೆ ಅಧಿಕಾರಿಗಳ ಧೋರಣೆಯಿಂದ ನೋವಾಗಿದೆ. ನಮ್ಮ ಹಕ್ಕಿನ ಜಮೀನಿನಲ್ಲಿ ನೆಮ್ಮದಿಯಿಂದ ಕೃಷಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು ಎಂದು ರೈತರು ಮನವಿ ಮಾಡಿದರು.

ಶಾಸಕ ಎಚ್.ಕೆ. ಸುರೇಶ್ ಮಾತನಾಡಿ, ರೈತರಿಗೆ ಯಾರೇ ಕಿರುಕುಳ ಕೊಟ್ಟರೂ ನಾವು ಸಹಿಸುವುದಿಲ್ಲ. ಹಿಟಾಚಿ ತೆಗೆದುಕೊಂಡು ರೈತರ ಜಮೀನಿಗೆ ಹೊಗುವ ಮೊದಲು ಅರಣ್ಯ ಅಧಿಕಾರಿಗಳು ನಮ್ಮೊಂದಿಗೆ ಮಾತನಾಡಬೇಕಿತ್ತು. ರೈತರ ಜಮೀನು ಅಕ್ರಮಿಸುವ ಕೆಲಸಕ್ಕೆ ಕೈ ಹಾಕಿದರೆ ಸಹಿಸುವುದಿಲ್ಲ. ಸಮಸ್ಯೆ ಇದ್ದರೆ ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ. ರೈತರ ಜಮೀನಿನಲ್ಲಿ ಟ್ರೆಂಚ್ ತೆಗೆಯಲು ಮುಂದಾಗಿದ್ದು ಸರಿಯಲ್ಲ. ರೈತರಿಗೆ ತೊಂದರೆ ಕೊಡುವುದು ಕೊನೆಯಾಗಬೇಕು. ಏನೇ ಸಮಸ್ಯೆ ಇದ್ದರೂ ನಮ್ಮ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ವಲಯ ಅರಣ್ಯಾಧಿಕಾರಿ ಲಷ್ಕರ್ ನಾಯಕ್ ಮಾತನಾಡಿ, ರೈತರಿಗೆ ತೊಂದರೆ ಕೊಡಲು ನಾವು ಮುಂದಾಗಿಲ್ಲ. ಅರಣ್ಯ ಜಾಗದ ಸುತ್ತ ಕಾಲುವೆ ತೆಗೆಯುವ ಕೆಲಸವನ್ನು ಆಗಾಗ್ಗೆ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಅರಣ್ಯ ಜಾಗದಲ್ಲಿ ನಾವು ಹಿಟಾಚಿಯಿಂದ ಟ್ರೆಂಚ್ ಮಾಡುವ ಕೆಲಸ ಕೈಗೊಂಡಿದ್ದೇವೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಎ.ಎಸ್.ಆನಂದ್, ರೈತ ಮುಖಂಡ ವಿಜಯ್ ಕುಮಾರ್ ಮುತ್ತಯ್ಯ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವಿಜಯ್ ಕುಮಾರ್ ಮಾತನಾಡಿದರು. ಪೊಲೀಸ್ ವೃತ್ತ ನಿರೀಕ್ಷಕ ಎಸ್.ಎನ್.ಜಯರಾಂ , ಪಿಎಸ್‌ಐ ಶಿವನಗೌಡ ಪಾಟೀಲ್, ರೈತ ಮುಖಂಡರಾದ ವಿಶ್ವನಾಥಯ್ಯ, ಅಡಗೂರು ರಂಗಯ್ಯ, ರಾಮಯ್ಯ, ರತ್ನಕುಮಾರ್, ಶಿವೇಗೌಡ, ಕಮಾರ, ಸತೀಶ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net